ಮಂಗಳೂರು, ಜ 07(SM): ಮೋಟಾರು ಕಾಯ್ದೆ ತಿದ್ದುಪಡಿಗೆ ವಿರೋಧ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿದ್ದು, ನಾಳೆ ಬಸ್ ಬಂದ್ ಆಗಬಹುದೋ ಎಂದು ಜಿಲ್ಲೆಯ ಜನತೆ ಆತಂಕಗೊಂಡಿದ್ದಾರೆ. ಆದರೆ, ಬಸ್ ಸಂಚಾರ ಎಂದಿನಂತೆ ಇರಲಿದೆ.
ಈ ನಡುವೆ ದಾಯ್ಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಅವರು ‘ನಾವು ಬಸ್ ಸಂಚಾರ ಎಂದಿನಂತೆ ನಡೆಸುತ್ತೇವೆ. ಆದರೆ ಎಲ್ಲಾದರೂ ನಾಳೆ ಬೆಳಿಗ್ಗೆ ಅಹಿತಕರ ಘಟನೆ ನಡೆದು, ಬಸ್ಸಿಗೆ ಕಲ್ಲು ಬಿದ್ದಲ್ಲಿ ಕೂಡಲೇ ನಾವು ಬಸ್ಸು ಸಂಚಾರ ಸ್ಥಗಿತಗೊಳಿಸುತ್ತೇವೆ ಎಂದಿದ್ದಾರೆ’.
ಅಲ್ಲದೆ ನಾಳೆಯ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಬಸ್ ಗಳನ್ನು ಓಡಿಸಬೇಕೇ ಅಥವಾ ನಿಲ್ಲಿಸಬೇಕೇ ಎಂಬುವುದಾಗಿ ನಿರ್ಧರಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ. ಇನ್ನು ಖಾಸಗಿ ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳು ಕೂಡಾ ನಾಳೆಯ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಬಸ್ಸು ಓಡಿಸುವುದಾಗಿ ಅವರು ಹೇಳಿದ್ದಾರೆ.