ಬಂಟ್ವಾಳ, ಮೇ 20 (DaijiworldNews/SM): ತಾಲೂಕಿನ ಪ್ರತಿಷ್ಠಿತ ಕಾಲೇಜಿನ ಸಂಚಾಲಕರ ರಾಜೀನಾಮೆಗೆ ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ ಮಹಿಳಾ ದೌರ್ಜನ್ಯದ ಪ್ರಕರಣ ದಾಖಲಾಗಿದ್ದು , ಇತ್ತಿಚೆಗೆ ಅವರ ಬಂಧನ ಕೂಡ ಆಗಿತ್ತು , ಜಾಮೀನಿನಲ್ಲಿ ಬಿಡುಗಡೆಯಾಗಿರುವ ಸಂಚಾಲಕರು ಕಾಲೇಜಿನ ಅವ್ಯವಸ್ಥೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಪ್ರಾಂಶುಪಾಲರನ್ನು ಮುಂದಿಟ್ಟು ವಿದ್ಯಾರ್ಥಿಗಳಿಗೆ ಕಿರುಕಿಳ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಎಫ್.ಐ.ಆರ್ ದಾಖಲಾಗಿರುವ ಕಾಲೇಜು ಸಂಚಾಲಕರ ಪ್ರಕಾಶ್ ಶೆಣೈ ತಕ್ಷಣ ರಾಜೀನಾಮೆ ನೀಡಬೇಕು ಹಾಗೂ ಎಫ್.ಐ.ಆರ್. ದಾಖಲಾಗಿರುವ ಇಬ್ಬರು ಉಪನ್ಯಾಸಕರನ್ನು ತಕ್ಷಣ ವಜಾ ಮಾಡುವಂತೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.
ತಹಶೀಲ್ದಾರ್ ಭೇಟಿ: ಪ್ರತಿಭಟನೆಗೆ ತಾತ್ಕಾಲಿಕ ಬ್ರೇಕ್:
ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ತಹಶೀಲ್ದಾರ್ ಡಾ.ಸ್ಮಿತಾ ರಾಮ್ ರವರು ಕಾಲೇಜಿಗೆ ಭೇಟಿ ನೀಡಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ್ದು, ವಿದ್ಯಾರ್ಥಿಗಳ ಬೇಡಿಕೆಯನ್ನು ಆಲಿಸಿದ್ದಾರೆ. ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಎಬಿವಿಪಿಯ ಬಂಟ್ವಾಳ ತಾಲೂಕು ಸಂಚಾಲಕ ಶಿವಪ್ರಸಾದ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೇಯಸ್, ಮಂಗಳೂರು ಜಿಲ್ಲಾ ಸಂಚಾಲಕರಾದ ನಿಷನ್ ಆಳ್ವ, ನಗರ ಕಾರ್ಯದರ್ಶಿ ಪ್ರತೀಕ್,ಪ್ರಮುಖರಾದ ದಿನೇಶ್ ಕೊಯ್ಲ, ಕಾಲೇಜು ವಿದ್ಯಾರ್ಥಿ ಪ್ರಮುಖರಾದ ರಂಜಿತ್ ರೈ ಮತ್ತಿತರರು ಈ ಸಂದರ್ಭದಲ್ಲಿದ್ದರು.