ನವದೆಹಲಿ,ಜ 07(MSP): ಅರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಮಹತ್ವದ ನಿರ್ಧಾರವನ್ನು ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಕೈಗೊಂಡಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರ ವಾರ್ಷಿಕವಾಗಿ 8 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಮೇಲ್ವರ್ಗದ ಸಮುದಾಯಕ್ಕೆ ಈ ಮೀಸಲಾತಿ ಘೋಷಿಸಿದೆ.
ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿ ಅಗತ್ಯವಿರುವುದರಿಂದ ಸರ್ಕಾರ ಸಂಸತ್ ನ ಕೊನೆಯ ದಿನವಾದ ಮಂಗಳವಾರ ಲೋಕಸಭೆಯಲ್ಲಿ ಮೀಸಲಾತಿ ತಿದ್ದುಪಡಿ ವಿಧೇಯಕ ಮಂಡಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಉದ್ಯೋಗದಲ್ಲಿ ಜಾತಿ ಆಧಾರಿತ ಮೀಸಲಾತಿ ಮಿತಿಯನ್ನು ಸುಪ್ರೀಂ ಕೋರ್ಟ್ ಗರಿಷ್ಟ ಮಿತಿ ಶೇಕಡಾ ೫೦ ನಿಗದಿಪಡಿಸಿರುವುದರಿಂದ ಶೇ.60ಕ್ಕೆ ಮೀಸಲಾತಿ ಪ್ರಮಾಣ ಏರಿಕೆಯಾಗಬೇಕಾಗಿದ್ದರಿಂದ ಸಂವಿಧಾನ ತಿದ್ದುಪಡಿ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಧೇಯಕ ಲೋಕಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ಮಂಡನೆಯಾಗಿ ಮಸೂದೆ ಅಂಗೀಕೃತಗೊಳ್ಳಬೇಕಾಗುತ್ತದೆ.