ಮಂಗಳೂರು, ಮೇ 19 (DaijiworldNews/DB): ಅವಧಿಪೂರ್ವ ಜನಿಸಿದ ಮಗುವಿಗೆ ಎದೆಹಾಲಿನ ಕೊರತೆಯಿಂದ ಸಂಕಷ್ಟ ಅನುಭವಿಸಿದ್ದ ತಾಯಿಯೊಬ್ಬರಿಗೆ ಸಾಮಾಜಿಕ ಜಾಲತಾಣದ ಮೂಲಕ ಮಾಡಲಾದ ಒಂದು ಮನವಿ ನೆರವಾಗಿದೆ. ಹಲವಾರು ತಾಯಂದಿರು ಎದೆ ಹಾಲು ಒದಗಿಸುವ ಮೂಲಕ ತಾಯಿ-ಮಗುವಿನ ಬಾಳಲ್ಲಿ ಹೊಸ ಭರವಸೆ ಚಿಗುರಿಸಿದ್ದಾರೆ.
ಮಂಗಳೂರಿನ ರಥಬೀದಿ ನಿವಾಸಿ ಅನುಷಾ ಕಳೆದೆರಡು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಅನುಷಾ ಗರ್ಭಿಣಿಯಾಗಿದ್ದ ವೇಳೆ ಪ್ರಿಕ್ಲಾಂಪ್ಸಿಯಾ ಎಂಬ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತಾಯಿ-ಮಗುವಿಗೆ ಯಾವುದೇ ಸಮಸ್ಯೆಯಾಗಬಾರದೆಂದು ವೈದ್ಯರು ಏಳು ತಿಂಗಳಲ್ಲೇ ಶಸ್ತ್ರಕ್ರಿಯೆ ನಡೆಸಿ ಮಗುವನ್ನು ಹೊರತೆಗೆದಿದ್ದರು. ಅವಧಿಪೂರ್ವ ಶಿಶು ಜನನವಾದ್ದರಿಂದ ಹುಟ್ಟಿದಾಗ ಮಗುವಿನ ತೂಕ ಕೇವಲ 900 ಗ್ರಾಂ ಇತ್ತು. ಕಳೆದೆರಡು ದಿನದ ಹಿಂದಷ್ಟೇ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಈ ವೇಳೆಗೆ 1.4 ಕೆ.ಜಿಗೆ ಮಗುವಿನ ತೂಕ ಏರಿಕೆಯಾಗಿತ್ತು. ಅವಧಿಪೂರ್ವವಾಗಿ ಜನಿಸಿದ ಶಿಶುವಾಗಿರುವುದರಿಂದ ಪ್ರತೀ 2 ಗಂಟೆಗೊಮ್ಮೆ 30 ಮಿಲಿ ಲೀಟರ್ ಸ್ತನ್ಯಪಾನ ಅವಶ್ಯವಾಗಿತ್ತು. ಆದರೆ ಅವಧಿಪೂರ್ವ ಜನ್ಮ ನೀಡಿದ್ದರಿಂದ ಅನುಷಾರಲ್ಲಿ ಎದೆಹಾಲಿನ ಕೊರತೆ ಎದುರಾಗಿತ್ತು. ಹೀಗಾಗಿ ಅವರು ವೆನ್ಲಾಕ್ನಲ್ಲಿ ಆರಂಭಿಸಲಾದ ಎದೆಹಾಲಿನ ಬ್ಯಾಂಕ್ ಮೊರೆ ಹೋದರಾದರೂ, ಅಲ್ಲಿ ಹಾಲು ಅಲಭ್ಯತೆಯಿಂದಾಗಿ ಬೆಂಗಳೂರಿಗೆ ಹೋಗುವ ನಿರ್ಧಾರ ಮಾಡಿದ್ದರು. ಆದರೆ ಆಗಲೇ ಆಸ್ಪತ್ರೆ ವೆಚ್ಚ ಭರಿಸಿ ಸುಸ್ತಾಗಿದ್ದ ದಂಪತಿ ಕುಳಿತು ಚರ್ಚಿಸಿ ಸಾಮಾಜಿಕ ಜಾಲತಾಣದ ಮೊರೆ ಹೋಗಲು ನಿರ್ಧರಿಸಿದರು. ಅದರಂತೆ ಮಂಗಳೂರು ಮೇರಿಜಾನ್ ಎಂಬ ಫೇಸ್ಬುಕ್ ಪೇಜ್ವೊಂದರಲ್ಲಿ ತಮ್ಮ ಸಂಕಷ್ಟವನ್ನು ತೋಡಿಕೊಂಡರು. ಈ ಮನವಿ ಪ್ರಕಟಿಸಿದ ಒಂದೇ ದಿನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಅನುಷಾರಿಗೆ ಸುಮಾರು 25ರಷ್ಟು ಕರೆಗಳು ಬಂದಿದ್ದು, ಎದೆಹಾಲು ಹಂಚಿಕೊಳ್ಳಲು ತಾಯಂದಿರು ಉತ್ಸುಕರಾದರು.
ಹೀಗಾಗಿ ಮೊದಲ ಹಂತದಲ್ಲಿ ಪುತ್ತೂರು, ಕಾರ್ಕಳದಿಂದ ಎದೆಹಾಲು ಪಡೆದುಕೊಳ್ಳಲಾಗಿದೆ. ಸದ್ಯ ಮಂಗಳೂರಿನ ಐವರು ತಾಯಂದಿರು ತಮ್ಮ ಎದೆಹಾಲನ್ನು ಸಂಗ್ರಹಿಸಿ ಅನುಷಾ ಅವರಿಗೆ ನೀಡುತ್ತಿದ್ದಾರೆ. ಅನುಷಾ ಅವರ ಪತಿ ಆ ತಾಯಂದಿರ ಮನೆಗಳಿಗೆ ತೆರಳಿ ಅದನ್ನು ಪಡೆದುಕೊಂಡು ಬರುತ್ತಿದ್ದಾರೆ. ದಾನಿಗಳಿಂದ ನೀಡಲಾದ ಎದೆಹಾಲನ್ನು ತಪಾಸಣೆ ನಡೆಸಿ ಬಳಿಕ ಮಗುವಿಗೆ ನೀಡಲಾಗುತ್ತದೆ.