ಕಾಸರಗೋಡು, ಮೇ 18 (DaijiworldNews/DB): ಕಾಸರಗೋಡು ಜಿಲ್ಲಾ ನವೀಕೃತ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಇಂದು ಸಂಜೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಕೆಲ ಶಕ್ತಿಗಳು ಯತ್ನಿಸುತ್ತಿದ್ದು, ಸರಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ನಡೆಯುತ್ತಿದೆ. ಕೆಲ ಮತೀಯ ಸಂಘಟನೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.
ನವೀಕೃತ ಕಟ್ಟಡದ ಫಲಕವನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಅನಾವರಣಗೊಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠ ವೈಭವ್ ಸಕ್ಸೇನಾ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್, ವಿಶೇಷ ವಿಭಾಗದ ಡಿವೈಎಸ್ಪಿ ಪಿ.ಕೆ. ಸುಧಾಕರನ್, ಅಪರಾಧ ವಿಭಾಗದ ಡಿವೈಎಸ್ಪಿ ಸುನಿಲ್ ಕುಮಾರ್, ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಮ್ಯಾಥ್ಯೂ ಮಾತನಾಡಿದರು.
ಕಾಸರಗೋಡು ಹೆಚ್ಚುವರಿ ಎಸ್ಪಿ ಹರಿಶ್ಚಂದ್ರ ನಾಯ್ಕ್ ಸ್ವಾಗತಿಸಿ, ಜಿಲ್ಲಾ ಅಪರಾಧ ವಿಭಾಗದ ಡಿವೈಎಸ್ಪಿ ಸತೀಶ್ ಅಲಕ್ಕಲ್ ವಂದಿಸಿದರು.