ಮಂಗಳೂರು, ಮೇ 18 (DaijiworldNews/MS): ನಗರದ ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಮೇ 16ರಂದು ವಶಕ್ಕೆ ಪಡೆದಿದ್ದಾರೆ.
ಉಡುಪಿ ಬೈಂದೂರಿನ ಪ್ರಯಾಣಿಕರೊಬ್ಬರು ಬಹ್ರೇನ್ ನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ತಪಾಸಣೆ ವೇಳೆ ಈತ 736 ಗ್ರಾಂ ತೂಕದ ಅಂಡಾಕಾರದ ಮೂರು ಪ್ಯಾಕೆಟ್ಗಳಲ್ಲಿ ಪೇಸ್ಟ್ ರೂಪದಲ್ಲಿ ಪ್ಯಾಕ್ ಮಾಡಿ ಗುದನಾಳದಲ್ಲಿಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತ ಪ್ರಯಾಣಿಕನಿಂದ ಒಟ್ಟು ₹ 37.17 ಲಕ್ಷ ಮೌಲ್ಯದ ಅಕ್ರಮ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.