ಮಂಗಳೂರು, ಮೇ 17 (DaijiworldNews/MS): ಜಿಲ್ಲೆಯ ವಿಕಲಚೇತನರ ಸಮಸ್ಯೆಗಳನ್ನು ಬಗೆಹರಿಸಲು ಪ್ರತೀ ತಿಂಗಳ 3ನೇ ಸೋಮವಾರ ಸಭೆಯನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗೋಪಾಲ ಕೃಷ್ಣ ಅವರಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದರು.
ಅವರು ಮೇ.16ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನರ ಕುಂದುಕೊರತೆ ಸಭೆಯಲ್ಲಿ ಈ ಸೂಚನೆ ನೀಡಿದರು.ಇನ್ನು ಮುಂದೆ ಕಡ್ಡಾಯವಾಗಿ ಪ್ರತಿ ತಿಂಗಳ 3ನೇ ಸೋಮವಾರ ವಿಕಲಚೇತನರ ಸಮಸ್ಯೆಗಳನ್ನು ಪರಿಹರಿಸುವ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಬೇಕು. ಸಭೆಯಲ್ಲಿ ಅವರ ಕುಂದು ಕೊರತೆ ಅಥವಾ ಅಹವಾಲುಗಳು ಇತ್ಯರ್ಥವಾಗಬೇಕು, ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ವಿ.ಆರ್.ಡಬ್ಲ್ಯೂಯ ಹಾಗೂ ಎಂ.ಆರ್.ಡಬ್ಲ್ಯೂಯಗಳು ಆಯಾ ತಾಲೂಕಿನ ಸಿ.ಡಿ.ಪಿ.ಓ ಕಚೇರಿಗಳಲ್ಲಿರುವ ಕಂಪ್ಯೂಟರ್ ಬಳಸಿಕೊಂಡು ಆನ್ಲೈನ್ ಮೂಲಕ ಭಾಗವಹಿಸಬೇಕು ಅಥವಾ ಜೂಮ್ ಆಪ್ ಮೂಲಕ ಆನ್ಲೈನ್ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಲಿಂಕ್ಅನ್ನು ಸೃಷ್ಟಿಸಿ ಕೊಡುವಂತೆ ಗೋಪಾಲಕೃಷ್ಣ ಅವರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ವಿಕಲಚೇತನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸ್ವಯಂ ಸೇವಾಸಂಸ್ಥೆಗಳು ಭಾಗವಹಿಸಲು ತಿಳಿಸಬೇಕು. ಜಿಲ್ಲೆಯ ವಿಕಲಚೇತನರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಸೌಲಭ್ಯಗಳು, ಅವರ ಸಮಸ್ಯೆಗಳು, ಇತ್ಯಾದಿಗಳನ್ನು 3ನೇ ಸೋಮವಾರದ ಸಭೆಯಲ್ಲಿ ಇತ್ಯರ್ಥ ಪಡಿಸಲಾಗುವುದು. ಈ ಸಭೆಯನ್ನು ನಿಯಮಿತವಾಗಿ ಆಯೋಜಿಸದಿದ್ದರೆ ಗೋಪಾಲ ಕೃಷ್ಣ ಅವರನ್ನು ಸಸ್ಪೆಂಟ್ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ವಿಕಲಚೇತನರ ಸಮಸ್ಯೆಯನ್ನು ಬಗೆಹರಿಸಲು, ವಿ.ಆರ್..ಡಬ್ಲ್ಯೂ ಹಾಗೂ ಎಂ.ಆರ್..ಡಬ್ಲ್ಯೂ ಅವರ ಸಮಸ್ಯೆಗಳನ್ನು ಬಗೆಹರಿಸಲು ವೈಯಕ್ತಿಕವಾಗಿ ಗಮನ ಹರಿಸುವಂತೆ ಗೋಪಾಲ ಕೃಷ್ಣ ಅವರಿಗೆ ತಿಳಿಸಿದ ಜಿಲ್ಲಾಧಿಕಾರಿಯವರು ಬುದ್ದಿಮಾಂದ್ಯ ಮಕ್ಕಳ ಪಿಂಚಣಿಯನ್ನು 800 ರೂ. ನಿಂದ 1400 ರೂ.ಗಳಿಗೆ ಹೆಚ್ಚಿಸಲಾಗಿದೆ. ಹಾಗೂ ಮಕ್ಕಳ ಪೊಷಣಾ ಭತ್ಯೆಯನ್ನು 2000 ರೂ.ಗಳಿಗೆ ಹೆಚ್ಚಿಸಲಾಗಿದ್ದು, ಈ ಮೊತ್ತ ಅರ್ಹರಿಗೆ ಸಚಿದಾಯವಾಗುತ್ತಿರುವ ಬಗ್ಗೆ ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರರಿಂದ ಖಾತ್ರಿ ಪಡಿಸಿಕೊಳ್ಳುವಂತೆ ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ವಿಕಲಚೇತನರ ಸಂಘದ ಅಧ್ಯಕ್ಷ ಮುರಳೀಧರ ನಾಯಕ್ ಸಾನಿಧ್ಯ ವಿದ್ಯಾ ಸಂಸ್ಥೆ, ಚೇತನ ವಿದ್ಯಾ ಸಂಸ್ಥೆ, ಸೈಂಟ್ ಆಗ್ನೇಸ್ ವಿಶೇಷ ಶಾಲೆಯ ಪ್ರತಿನಿಧಿಗಳು ಹಾಗೂ ಸಂಬಂಧಿಸಿದಅಧಿಕಾರಿಗಳು ಸಭೆಯಲ್ಲಿದ್ದರು.