ಮಂಗಳೂರು, ಜ 06 (MSP): ಸುವರ್ಣ ತ್ರಿಭುಜ ಬೋಟ್ ಹಾಗೂ ಮೀನುಗಾರರ ಪತ್ತೆಗೆ ಆಗ್ರಹಿಸಿ ಮಲ್ಪೆಯಲ್ಲಿಂದು ನಡೆಯುತ್ತಿರುವ ಪ್ರತಿಭಟನೆಯ ಬೆಂಬಲಿಸಿ ಮಂಗಳೂರು ಬಂದರು ದಕ್ಕೆಯಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಪ್ರತಿಭಟನೆಯ ಹಿನ್ನಲೆಯಲ್ಲಿ ಭಾನುವಾರ ಬೆಳಗ್ಗಿನಿಂದಲೇ ಸದಾ ಜನಜಂಗುಳಿಯಿಂದ ಗಿಜುಗುಡುತ್ತಿದ್ದ ದಕ್ಕೆಯಲ್ಲಿ ಯಾವುದೇ ಮೀನುಗಾರಿಕೆ ಚಟುವಟಿಕೆ ನಡೆಯದೆ ಸ್ತಬ್ದವಾಗಿದೆ. ದೋಣಿ, ಬೋಟ್ಗಳು ಮೀನುಗಾರಿಕೆ ಕಡಲಿಗಿಳಿಯಲಿಲ್ಲ. ಆಳ ಸಮುದ್ರ ಬೋಟು, ಪರ್ಸಿನ್ ಟ್ರಾಲ್ ಬೋಟ್, ಗಿಲ್ನೆಟ್ ಸಹಿತ ಸುಮಾರು 1,200ಕ್ಕೂ ಅಧಿಕ ಬೋಟುಗಳು ಬಂದರು ದಕ್ಕೆಯಲ್ಲಿದ್ದು, ಎಲ್ಲವೂ ಚಟುವಟಿಕೆ ಸ್ಥಗಿತಗೊಳಿಸಿವೆ.
ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಬೋಟ್ ಮಾಲೀಕ ರಾಜರತ್ನಾ ಸನಿಲ್, " ಘಟನೆ ನಡೆದು 22 ದಿನಗಳು ಕಳೆದರೂ ಈವರೆಗೆ 7 ಮೀನುಗಾರರು ಪತ್ತೆಯಾಗಿಲ್ಲ. ಮೀನುಗಾರರ ನಾಪತ್ತೆ ಪ್ರಕರಣವನ್ನು ಗಂಭೀರ ಸಮಸ್ಯೆಯಾಗಿ ಪರಿಗಣಿಸುವುದು ಬಿಟ್ಟು ಇದನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕಣ್ಮರೆಯಾದ ಮೀನುಗಾರರ ಪತ್ತೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ತಕ್ಷಣ ಕ್ರಮ ಜರುಗಿಸಬೇಕು" ಎಂದು ಅವರು ಒತ್ತಾಯಿಸಿದರು.