ಮಂಗಳೂರು, ಜ 06 (MSP): ಕರಾವಳಿ ಹೆಮ್ಮೆಯಾಗಿರುವ ವಿಜಯಾ ಬ್ಯಾಂಕ್ ನ್ನು ಶಾಶ್ವತವಾಗಿ ಅಳಿಸಿ ಹಾಕುವ ಹುನ್ನಾರದಿಂದ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾ ದೇನಾ ಬ್ಯಾಂಕ್ನೊಂದಿಗೆ ವಿಲೀನ ಮಾಡುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಜ.9ರಂದು ಮಂಗಳೂರು ಬಂದ್ಗೆ ಜಿಲ್ಲಾ ಯುವ ಕಾಂಗ್ರೆಸ್ ಕರೆ ನೀಡಿದೆ.
ಜ.6ರ ಭಾನುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಕೇಂದ್ರ ಸರಕಾರದ ನಿರ್ಧಾರ ವಿರೋಧಿಸಿ ಜ.9ರಂದು ಬಂದ್ ನಡೆಸಲಾಗುವುದು ಎಂದರು. ಲಾಭದಲ್ಲಿರುವ ಕರಾವಳಿ ಮೂಲದ ವಿಜಯಾ ಬ್ಯಾಂಕ್ ಅನ್ನು ನಷ್ಟದಲ್ಲಿರುವ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದರೂ, ಸಂಸದ ನಳಿನ್ಕುಮಾರ್ ಕಟೀಲ್ ಮೌನ ವಹಿಸಿರುವುದು ಯಾಕೆ, ಪ್ರಧಾನಿಯವರಿಗೆ ಸಂಸದರು ಜಿಲ್ಲೆಯನ್ನು ಒತ್ತೆ ಇಟ್ಟಿದ್ದಾರೆಯೇ ಎಂದು’ ಎಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಈ ಪ್ರತಿಭಟನೆಗೆ ಸಂಸದರು ಕೂಡಾ ಬೆಂಬಲ ನೀಡಲಿ ಎಂದು ಒತ್ತಾಯಿಸಿದರು.