ಉಡುಪಿ, ಮೇ 16 (DaijiworldNews/DB): ಉಡುಪಿಯಲ್ಲಿ ಈವರೆಗೆ ಟೊಮೇಟೊ ಫ್ಲೂ ಪತ್ತೆಯಾಗಿಲ್ಲ. ಪೋಷಕರು ಅನಗತ್ಯ ಆತಂಕ ಪಡುವ ಅಗತ್ಯವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಮಕ್ಕಳಲ್ಲಿ ಜ್ವರ ಕಂಡು ಬಂದಾಗ ತಾಂತ್ರಿಕವಾಗಿ ಪರೀಕ್ಷೆ ನಡೆಸಲಾಗುತ್ತದೆ, ಟೊಮೆಟೊ ಫ್ಲೂಗೆ ಹೋಲುವಂತಹ ಒಂದು ಪ್ರಕರಣ ಪತ್ತೆಯಾಗಿತ್ತು. ಮೂರು ತಿಂಗಳ ಹಿಂದೆ ಪ್ರಕರಣ ಪತ್ತೆಯಾಗಿತ್ತು. ಫೂಟ್ ಆಂಡ್ ಹ್ಯಾಂಡ್ ಲಕ್ಷಣಗಳಿರುವ ಪ್ರಕರಣ ಇದಾಗಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಗೆ ನಾವು ವರದಿ ಮಾಡಿದ್ದೇವೆ ಎಂದರು.
ಟೊಮೇಟೋ ಫ್ಲೂ ಮತ್ತು ಈ ಪ್ರಕರಣಕ್ಕೆ ಯಾವುದೇ ಸಂಬಂಧ ಇಲ್ಲ. ಇತ್ತೀಚಿಗೆ ಯಾವುದಾದರೂ ಹೊಸ ಪ್ರಕರಣ ಬಂದಿದೆಯೇ ಎಂಬುದಾಗಿ ಮಾಹಿತಿ ಸಂಗ್ರಹಿಸುತ್ತೇವೆ. ಖಾಸಗಿ ಕ್ಲಿನಿಕ್ ಗಳಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಎಲ್ಲಾ ಮಕ್ಕಳ ತಜ್ಞರಿಗೂ ಅಲರ್ಟ್ ಇರಲು ಸೂಚಿಸಿದ್ದೇವೆ. ಕೇರಳದಲ್ಲಿ ಪ್ರಕರಣ ಪತ್ತೆಯಾದ ನಂತರ ಮಕ್ಕಳ ತಜ್ಞರಿಗೆ ಸೂಚನೆಗಳನ್ನು ಕೊಟ್ಟಿದ್ದೇವೆ. ಟೊಮೆಟೊ ಫ್ಲೂ ಹೋಲುವಂತಹ ಜ್ವರ ಬಂದರೂ ತಿಳಿಸಲು ಹೇಳಿದ್ದೇವೆ. ಆದರೆ ಈವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲ. ಪೋಷಕರು ಆತಂಕ ಪಡುವ ಅಗತ್ಯ ಇಲ್ಲ. ಮಕ್ಕಳಲ್ಲಿ ಬೇರೆ ಬೇರೆ ತರದ ಫ್ಲೂಗಳು ಕಾಣಿಸಿಕೊಳ್ಳುತ್ತದೆ. ನಿರಂತರ ಸರ್ವೇಕ್ಷಣೆ ನಡೆಸುತ್ತಿದ್ದೇವೆ ಎಂದವರು ತಿಳಿಸಿದರು.