ಕಾರ್ಕಳ, ಮೇ 16 (DaijiworldNews/DB): ಮದುವೆಗಾಗಿ ಅನಗತ್ಯ ಖರ್ಚು ಮಾಡುವವರೇ ಈಗಿನ ಕಾಲದಲ್ಲಿ ಹೆಚ್ಚು. ಆದರೆ ಇಲ್ಲೊಬ್ಬ ಯುವಕ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟು 10 ಲಕ್ಷ ರೂ.ಗಳನ್ನು ಬಡ ಮತ್ತು ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ನೀಡಿ ಮಾದರಿ ಕಾರ್ಯ ಮಾಡಿದ್ದಾರೆ.
ಕನ್ನಡಿಬೆಟ್ಟು ತೆಲ್ಲಾರ್ ನಿವಾಸಿ ದಿ. ಶಂಕರ್ ಶೆಟ್ಟಿ ಮತ್ತು ಗುಲಾಬಿ ಶೆಟ್ಟಿ ದಂಪತಿ ಪುತ್ರ ಸುಕೇಶ್ ಶೆಟ್ಟಿ ಅವರೇ ಇಂತಹ ಮಾದರಿ ಕಾರ್ಯ ಮಾಡಿದ ವ್ಯಕ್ತಿ. ಸುಕೇಶ್ ಮುಂಬೈಯಲ್ಲಿ ಉದ್ಯಮಿಯಾಗಿದ್ದು, ಅವರ ಮದುವೆ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸರಳವಾಗಿ ನಡೆದಿದೆ. ಸರಳ ಮದುವೆಯಾಗುವ ಮೂಲಕ ಮದುವೆಗಾಗುವ ಖರ್ಚನ್ನು ಉಳಿತಾಯ ಮಾಡಿ ಬಡವರಿಗೆ, ಸಮಸ್ಯೆಯಲ್ಲಿರುವವರಿಗೆ ಹಂಚಿದ್ದಾರೆ. ಮದುವೆ ದಿನದಂದೇ 10 ಲಕ್ಷ ರೂ.ಗಳನ್ನು ಈ ಕಾರ್ಯಕ್ಕೆ ಬಳಸುವ ಮೂಲಕ ಮಾದರಿಯಾಗಿದ್ದಾರೆ. ಸುಕೇಶ್ ಅವರ ಈ ನಿರ್ಧಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಿವುಡುತನ ಸಮಸ್ಯೆಯಿಂದ ಬಳಲುತ್ತಿರುವ ದುರ್ಗಾ ಮಾಲೆಬೆಟ್ಟುವಿನದ ಜ್ಯೋತಿ ಪೂಜಾರಿ ಅವರಿಗೆ 40 ಸಾವಿರ ರೂ. ವೆಚ್ಚದ ಶ್ರವಣ ಸಾಧನವನ್ನು ನೀಡಿದ್ದಾರೆ. ಕಾಂತಾವರದಲ್ಲಿ ಬಿದ್ದು ಕಾಲಿನ ಸ್ವಾಧೀನ ಕಳೆದುಕೊಂಡ ದಿವ್ಯಾ ಆಚಾರ್ಯ ಅವರಿಗೆ ಕೃತಕ ಕಾಲು ಒದಗಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಹೊಸ್ಮಾರ್ನ ರಂಜಿತ್ ಪೂಜಾರಿ ಹಾಗೂ ಅಜಿಕಾರಿನ ಗಣೇಶ್ ನಂದಾರ್ ಅವರಿಗೆ ಹಣಕಾಸಿನ ನೆರವು ನೀಡಿದ್ದಾರೆ. ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿರುವ ಹೊಟೇಲ್ ಕಾರ್ಮಿಕ ಹರೀಶ್ ಸೇರಿಗಾರ್ ಅವರ ಆರು ವರ್ಷದ ಮಗು ಮತ್ತು ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಬೆಳ್ಮಣ್ ಸೂದಾ ನಿವಾಸಿ ಜಯಶೀಲಾ ದೇವಾಡಿಗ ಅವರಿಗೂ ಆರ್ಥಿಕ ನೆರವು ನೀಡಲಾಯಿತು. ಸಾಕುದನ ಕಳವಾಗಿದ್ದರಿಂದ ನೊಂದಿದ್ದ ಕರಿಯಕಲ್ಲು ಮೋಹಿನಿ ಮೂಲ್ಯ ಅವರಿಗೆ ದನಗಳನ್ನು ಕೂಡಾ ದಾನ ಮಾಡಲಾಯಿತು. ಅಗ್ನಿ ಅವಘಡದಿಂದ ಮನೆ ಕಳೆದುಕೊಂಡ ಹರೀಶ್ ಮೂಲ್ಯ ಅವರಿಗೆ ಆರ್ಥಿಕ ನೆರವು, ತಂದೆಯಿಲ್ಲದ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಒಂದನೇ ತರಗತಿ ಮತ್ತು ಐದನೇ ತರಗತಿ ಓದುತ್ತಿರುವ ಇಬ್ಬರು ಮಕ್ಕಳಿಗೆ ಧನಸಹಾಯ, ಮನೆ ರಿಪೇರಿಗಾಗಿ ಕಡಂಬಳದ ಅಣ್ಣಿ ಮೇರ ಅವರಿಗೆ ಧನಸಹಾಯ ನೀಡಲಾಯಿತು.ರವಳನಾಥ ದೇವಳದ ಪಕ್ಕದಲ್ಲಿ ವಾಸಿಸುತ್ತಿರುವ ರತ್ನಾ ಮತ್ತು ಶಾರದಾ ಆಚಾರ್ಯ ಅವರಿಗೆ ಮನೆ ನಿರ್ಮಾಣಕ್ಕೆ ಧನಸಹಾಯ, ಸ್ವಂತ ಮನೆ ಹೊಂದಿಲ್ಲದ ಸುಮತಿ ದೇವಾಡಿಗ ಅವರಿಗೆ ಆರ್ಥಿಕ ನೆರವು, ಕ್ಯಾನ್ಸರ್ನಿಂದ ಮೃತಪಟ್ಟ ಕಡ್ಕಾರ್ ನಾಗರಾಜ್ ಆಚಾರ್ಯ ಅವರ ಕುಟುಂಬಕ್ಕೆ ಧನಸಹಾಯ, ನಡ್ಪಾಲು ಜಲಜಾ ಪೂಜಾರಿ ಮತ್ತು ಹಿರಿಯ ನಾಗರಿಕರಾದ ಪ್ರಭಾಕರ ಶೆಟ್ಟಿ ಮತ್ತು ಸುನಿತಾ ಅವರಿಗೂ ಆರ್ಥಿಕ ಸಹಾಯ ಒದಗಿಸಲಾಯಿತು.