ಬಂಟ್ವಾಳ, ಮೇ 15 (DaijiworldNews/SM): ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಗೂಡ್ಸ್ ಟೆಂಪೋ ವಾಹನವನ್ನು ಅಡ್ಡಗಟ್ಟಿದ ಪೊಲೀಸರನ್ನು, ಆರೋಪಿಗಳು ದೂಡಿ ಹಾಕಿ, ಹಲ್ಲೆಗೈದು ಪರಾರಿಯಾಗಿರುವ ಘಟನೆ ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯ ಕುದ್ಕೋಳಿ ಎಂಬಲ್ಲಿ ನಡೆದಿದೆ.
ಪುಂಜಾಲಕಟ್ಟೆ ಠಾಣೆಯ ಪಿಎಸ್ಐ ಸುತೇಶ್ ಕೆ.ಪಿ. ಅವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ವಾಮದಪದವು ಕಡೆಯಿಂದ ಕುದ್ರೋಳಿ ಕಡೆಗೆ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆಂಬ ಮಾಹಿತಿ ತಿಳಿದುಬಂದಿತ್ತು. ಇದಕ್ಕಾಗಿ ಠಾಣೆಯಲ್ಲಿ ವಿಶ್ರಾಂತಿಯಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ನವೀನ ಮತ್ತು ಪ್ರಭಾಕರ ಮೋರೆ ಎಂಬವರ ಜೊತೆಗೂಡಿ ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಎಲ್ವೇಲು ಎಂಬಲ್ಲಿ ವಾಹನ ತಪಾಸಣೆ ಕಾರ್ಯ ಆರಂಭಿಸಿದ್ದರು.
ಈ ವೇಳೆ, ನಸುಕಿನ 4.15 ವೇಳೆಗೆ ವಾಮದಪದವು ಕಡೆಯಿಂದ ಕುದ್ರೋಳಿ ಕಡೆಗೆ ಕೆಎ 70 -3124 ಸಂಖ್ಯೆಯ ಟಾಟಾ ಇಂಟ್ರಾ ವಿ 10 ಗೂಡ್ಸ್ ಮಿನಿ ಟೆಂಪೋ ಅತಿ ವೇಗವಾಗಿ ಬರುತ್ತಿದ್ದುದನ್ನು ನೋಡಿ ಪೊಲೀಸರು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ವಾಹನ ನಿಲ್ಲಿಸದೆ ಪರಾರಿಯಾಗಿದ್ದು ಪೊಲೀಸರು ಇಲಾಖಾ ಜೀಪಿನಲ್ಲಿ ಬೆನ್ನಟ್ಟಿ ಕುದ್ಕೋಳಿ ಜಂಕ್ಷನ್ ಎಂಬಲ್ಲಿ ತಡೆ ಹಾಕಿದ್ದಾರೆ.
ಆರೋಪಿಗಳು ವಾಹನದಿಂದ ಇಳಿದು ಓಡಲು ಯತ್ನಿಸಿದಾಗ, ಪೊಲೀಸರು ಅವರನ್ನು ಹಿಡಿಯಲು ಯತ್ನಿಸಿದ್ದು ಪಿಎಸ್ಐ ಸುತೇಶ್ ಅವರನ್ನು ಕೈಯಿಂದ ನೆಲಕ್ಕೆ ದೂಡಿ ಹಾಕಿ ಓಡಿದ್ದಾರೆ. ಇದರಿಂದ ಪುಂಜಾಲಕಟ್ಟೆ ಠಾಣೆ ಪಿಎಸ್ಐ ಸುತೇಶ್ ಅವರ ಭುಜಕ್ಕೆ ಗಾಯವಾಗಿದೆ.
ಸದ್ರಿ ವಾಹನದಲ್ಲಿ ಪರಿಶೀಲಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ಹಿಂಸಾತ್ಮಕವಾಗಿ ಮೂರು ದನಗಳನ್ನು ಹಿಡಿದು ಕೂಡಿಹಾಕಿದ್ದು ಕಂಡುಬಂದಿದೆ. ಅವು ಎಲ್ಲಿಂದಲೋ ಕದ್ದು ತಂದಿರುವ ದನಗಳು ಎನ್ನುವ ಶಂಕೆ ವ್ಯಕ್ತವಾಗಿದ್ದು. ದನ ಮತ್ತು ಗೂಡ್ಸ್ ಟೆಂಪೋವನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಾಹನದ ಒಳಗಿದ್ದ ಎರಡು ಮೊಬೈಲನ್ನು ಪತ್ತೆ ಮಾಡಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೈದು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಜರುಗಿಸಿದ್ದಾರೆ. ಪಿಎಸ್ಐ ಸುತೇಶ್ ಅವರ ದೂರಿನಂತೆ ಆರೋಪಿಗಳ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಹಲೈ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.