ಉಡುಪಿ, ಜ 06(MSP): ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಗೋವಾ ಮತ್ತು ಮಹಾರಾಷ್ಟ್ರದ ವ್ಯಾಪ್ತಿಯಲ್ಲಿಯೂ ವ್ಯಾಪಕ ಶೋಧ ನಡೆಯುತ್ತಿದೆ.ಉನ್ನತ ಮಟ್ಟದ ತನಿಖೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದರು. ಅಲ್ಲದೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ದುರಂತಕ್ಕೀಡಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆ ಪುಷ್ಠಿ ನೀಡುವಂತೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲಾ ವ್ಯಾಪ್ತಿಯ ಸಮುದ್ರದಲ್ಲಿ ಸ್ಥಳೀಯ ಮೀನುಗಾರರಿಗೆ ಮೀನು ಶೇಖರಿಸಿಡುವ ಕೆಲವು ಪ್ಲಾಸ್ಟಿಕ್ ಬಾಕ್ಸ್ಗಳು ಸಿಕ್ಕಿವೆ ಎಂದು ಮಾಹಿತಿ ನೀಡಿದರು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಗೃಹ ಸಚಿವ ಎಂ.ಬಿ.ಪಾಟೀಲ್, ‘ಬೋಟ್ ದುರಂತಕ್ಕೀಡಾಗಿದೆ ಎಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ. ಮಹಾರಾಷ್ಟ್ರ ಮೀನುಗಾರರಿಗೆ ಪ್ಲಾಸ್ಟಿಕ್ ಕಂಟೈನರ್ಗಳು ಯಾವ ಭಾಗದಲ್ಲಿ ಸಿಕ್ಕಿವೆ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ’ ಎಂದರು.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮಾಲವಣ್ ಮತ್ತು ರತ್ನಗಿರಿ ನಡುವೆ ಮೀನುಗಳನ್ನು ತುಂಬುವ 3 ಕಂಟೈನರ್ ಗಳು ಪತ್ತೆಯಾಗಿದೆ. ಇದರ ಮೇಲೆ ಮೇಲೆ ಎಸ್.ಟಿ ಎಂದು ಬರೆಯಲಾಗಿದೆ. ಎಸ್.ಟಿ ಎಂದರೆ ನಾಪತ್ತೆಯಾಗಿರುವ ‘ಸುವರ್ಣ ತ್ರಿಭುಜ’ ಬೋಟ್ನ ಹೆಸರು ಇರಬಹುದು ಎಂಬ ಶಂಕೆ ಇದೆ. ಸಿಂಧುದುರ್ಗದ ಎಸ್ಪಿ ತನಿಖೆಯ ನೇತೃತ್ವ ವಹಿಸಿ ದ್ದಾರೆ. ಜತೆಗೆ ರಾಜ್ಯದ ಅಧಿಕಾರಿಗಳ ತಂಡ ಮಹಾರಾಷ್ಟ್ರಕ್ಕೆ ತೆರಳಿದೆ. ಮೀನುಗಾರರು ಆತಂಕಪಡುವ ಅಗತ್ಯವಿಲ್ಲ. ಶೀಘ್ರ ಬೋಟ್ ಪತ್ತೆಯಾಗಲಿದೆ ಎಂದು ತಿಳಿಸಿದರು.
ಮೀನುಗಾರರ ಪತ್ತೆ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿಲ್ಲ. ನಾಪತ್ತೆಯಾದ ದಿನದಿಂದಲೂ ಶಕ್ತಿಮೀರಿ ಶ್ರಮಿಸಿದೆ. ಕೇಂದ್ರ ಸರ್ಕಾರದ ನೆರವು ಪಡೆದು ಹೆಲಿಕಾಪ್ಟರ್ಗಳ ಮೂಲಕ, ಹಡಗುಗಳ ಮೂಲಕ ಶೋಧ ನಡೆಸಲಾಗಿದೆ. ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಮೀನುಗಾರಿಕೆ ಸಚಿವರು ಇಷ್ಟು ದಿನವಾದರೂ ಬಂದಿಲ್ಲ ಎಂದು ಮೀನುಗಾರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದಾಗ ಉತ್ತರಿಸಿದ ಸಚಿವೆ.ಡಾ ಜಯಮಾಲಾ ಜ.8 ರಂದು ಬರುವುದಾಗಿ ತಿಳಿದ್ದಾರೆ ಎಂದರು. ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಶಾಸಕ ರಘುಪತಿ ಭಟ್ , ಪ್ರಮೋದ್ ಮಧ್ವರಾಜ್ , ಯು.ಆರ್ ಸಭಾಪತಿ, ಡಾ,ಜಿ.ಶಂಕರ್ , ಯಶ್ ಪಾಲ್ ಸುವರ್ಣ , ಸತೀಶ್ ಕುಂದರ್ ಮುಂತಾದವರು ಒತ್ತಾಯಿಸಿದರು. ಈ ವೇಳೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದರು.