ಮಂಗಳೂರು, ಮೇ 14 (DaijiworldNews/DB): ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 32ನೇ ಪದವಿ ಪ್ರದಾನ ಸಮಾರಂಭ ಮೇ14ರ ಶನಿವಾರದಂದು ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಆಳ್ವಾಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಹಾಗೂ ಚೇರ್ಮೆನ್ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಮಾನವೀಯತೆ, ಕರುಣೆ, ಪ್ರೀತಿ, ಸೇವಾ ಮನೋಭಾವವನ್ನು ಬೆಳೆಸಿಕೊಂಡು, ಇಂದು ತೆಗೆದುಕೊಂಡ ಪ್ರತಿಜ್ಞೆಯನ್ನು ಸದಾ ನೆನಪಿಸಿಕೊಂಡು ತಮ್ಮ ವೈದ್ಯ ವೃತ್ತಿಯನ್ನು ಮುಂದುವರಿಸಬೇಕು ಎಂದು ಹೇಳಿದರು.
ಗೌರವಾನ್ವಿತ ಅತಿಥಿಯಾಗಿದ್ದ ಮೆಡಿಕಲ್ ಅಸೆಸ್ಮೆಂಟ್ ಮತ್ತು ರೇಟಿಂಗ್ ಬೋರ್ಡ್ ಫಾರ್ ಹೋಮಿಯೋಪಥಿಯ ಅಧ್ಯಕ್ಷ ಡಾ. ಕೆ. ಆರ್. ಜನಾರ್ದನನ್ ನಾಯರ್ ಮಾತನಾಡಿ, ವಿದ್ಯಾರ್ಥಿಗಳು ಹೋಮಿಯೋಪಥಿಯ ಪರಿಕಲ್ಪನೆಯಾದ ವೈಯಕ್ತೀಕರಣದ ಕೌಶಲ್ಯವನ್ನು ಅರ್ಥಮಾಡಿಕೊಂಡು ಕಲಿಯಬೇಕು. ಪ್ರಸ್ತುತ ಸಮಯದ ಅವಶ್ಯಕತೆಯಾದ ಸಂಶೋಧನೆಯತ್ತ ಉದಯೋನ್ಮುಖ ಹೋಮಿಯೋಪಥಿ ವೈದ್ಯರುಗಳು ಗಮನ ಹರಿಸಬೇಕು ಎಂದು ಅಭಿಪ್ರಾಯಪಟ್ಟರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮಟ್ಟದಲ್ಲಿ ಕಾಲೇಜಿಗೆ ರ್ಯಾಂಕ್ ತಂದ 8 ಪದವೀಧರ ಮತ್ತು 9 ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಬಿಷಪ್ರವರು ಸನ್ಮಾನಿಸಿದರು. ಈ ವರ್ಷ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು ಅವಧಿವಾರು 31 ರ್ಯಾಂಕ್ ಹಾಗೂ ವಿಷಯವಾರು 127 ರ್ಯಾಂಕ್ ಗಳಿಸುವುದರೊಂದಿಗೆ ಒಟ್ಟು 166 ರ್ಯಾಂಕ್ಗಳನ್ನು ತನ್ನದಾಗಿಸಿಕೊಂಡಿದೆ.
2015-16ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ ಚಿನ್ನದ ಪದಕವನ್ನು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪದವೀಧರೆ ಡಾ. ಡಾನಿಯಾ ಗಳಿಸಿದ್ದು ಹಾಗೂ ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಹೋಮಿಯೋಪಥಿ ವತಿಯಿಂದ ಸ್ನಾತಕೋತ್ತರ ಪದವಿಯ ಅತ್ಯುತ್ತಮ ಪ್ರಬಂಧ ಮಂಡಣೆಗಾಗಿ ನೀಡಿರುವ ವಿದ್ಯಾರ್ಥಿವೇತನವನ್ನು 2018-19 ರ ಹೋಮಿಯೋಪಥಿ ಫಾರ್ಮಸಿ ವಿಭಾಗದ ಡಾ. ಗಾಯತ್ರಿ ಕ್ರೋವಿಡಿಯವರು ಪಡೆದಿದ್ದು ಇಬ್ಬರನ್ನೂ ಈ ವೇಳೆ ಸನ್ಮಾನಿಸಲಾಯಿತು.
6ನೇ ಮುಲ್ಲೇರಿಯನ್ ಬ್ಯಾಚ್ ಪ್ರಾಯೋಜಿಸಿದ ‘ಡಾ. ಸುಮೊದ್ ಜಾಕೊಬ್ ಸೊಲೊಮನ್ ಪ್ರಶಸ್ತಿಯನ್ನು 2018-19 ಬ್ಯಾಚ್ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ಡಾ. ಆನ್ಸಿ ಜಾರ್ಜ್ ರವರಿಗೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹ ಅವರು, ಪ್ರತಿಷ್ಠಿತ ಅಧ್ಯಕ್ಷೀಯ ಚಿನ್ನದ ಪದಕವನ್ನು ಅತ್ಯುತ್ತಮ ಸಾಧನೆ ಮಾಡಿದ ಹೋಮಿಯೋಪಥಿ ಪದವಿ ವಿದ್ಯಾರ್ಥಿನಿ ಡಾ. ಸಿಮ್ನಾ ತಸ್ನೀಮ್ ಟಿ. ಎ. ಅವರಿಗೆ ನೀಡಿ ಗೌರವಿಸಿದರು.
ಸಮಾರಂಭದಲ್ಲಿ 99 ಪದವಿ ವಿದ್ಯಾರ್ಥಿಗಳು ಹಾಗೂ 26 ಸ್ನಾತಕೋತ್ತರ ಪದವೀದರರಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು. ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ವಂದನೀಯ ರೋಹನ್ ಡಾಯಸ್, ಕಾಲೇಜಿನ ಉಪಪ್ರಾಂಶುಪಾಲೆ ಡಾ. ವಿಲ್ಮಾ ಮೀರಾ ಡಿ’ಸೋಜ, ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ ಯು.ಕೆ., ಹಾಗೂ ಕಾರ್ಯಕ್ರಮದ ಸಂಯೋಜಕ ಡಾ. ರಂಜನ್ ಕ್ಲೆಮೆಂಟ್ ಬ್ರಿಟ್ಟೊ ಉಪಸ್ಥಿತರಿದ್ದರು. ಪದವೀದರರ ಪರವಾಗಿ ಡಾ. ರಿಯಾ ಗ್ರೇಸ್ ದೇವಾಸಿಯ ಅನಿಸಿಕೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಇ.ಎಸ್.ಜೆ. ಪ್ರಭು ಕಿರಣ್ ಅವರು ವಾರ್ಷಿಕ ವರದಿಯಲ್ಲಿ 2021-22ರಲ್ಲಿ ಕಾಲೇಜಿನಲ್ಲಿ ನಡೆದ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು ಮತ್ತು ಪದವಿ ಸ್ವೀಕರಿಸಿದ ಹೋಮಿಯೋಪಥಿ ವೈದ್ಯರ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂಸ್ಥೆಯ ನಿರ್ದೇಶಕ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಸ್ವಾಗತಿಸಿದರು. ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್ ಕ್ರಾಸ್ತಾ ವಂದಿಸಿದರು. ಡಾ. ರೇಶಲ್ ನೊರೊನ್ಹ ಹಾಗೂ ಡಾ. ಸ್ಕಂದನ್ ಎಸ್. ಕುಮಾರ್ ನಿರೂಪಿಸಿದರು.