ಮಂಗಳೂರು, ಮೇ 14 (DaijiworldNews/HR): ನಗರ ವ್ಯಾಪ್ತಿಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿನ ಆರೋಪಿಯ ಹೆಸರನ್ನು ಪೊಲೀಸರಲ್ಲಿ ಪ್ರಭಾವ ಬೀರಿ ಮಾತುಕತೆ ನಡೆಸಿ ಪ್ರಕರಣದಿಂದ ಹೆಸರನ್ನು ತೆಗೆಯುತ್ತೇನೆ ಎಂದು ಹೇಳಿ ರೂ 2.95 ಲಕ್ಷ ಹಣವನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಬ್ದುಲ್ ಖಾದರ್ ರಿಝ್ವಾನ್ (28) ಎಂದು ಗುರುತಿಸಲಾಗಿದೆ.
2021 ನೇ ದಶಂಬರ್ ತಿಂಗಳಲ್ಲಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣವೊಂದು ದಾಖಲಾಗಿದ್ದು, ಈ ಪ್ರಕರಣದಲ್ಲಿನ ಆರೋಪಿಯು ದಸ್ತಗಿರಿಯಾಗದೇ ಇದ್ದು, ಈತನ ದಸ್ತಗಿರಿಗಾಗಿ ಹುಡುಕಾಡುತ್ತಿದ್ದರು. ಈ ಸಮಯದಲ್ಲಿ ಆತನನ್ನು ಸಂಪರ್ಕಿಸಿದ ಇಬ್ಬರು ಪ್ರಕರಣದಲ್ಲಿ ಹೆಸರನ್ನು ತೆಗೆಯಲು ಪೊಲೀಸರಿಗೆ ಹಣ ನೀಡಿ ಅವರ ಜೊತೆ ಪ್ರಭಾವ ಬೀರಿ ಮಾತುಕತೆ ನಡೆಸಿ ಕೇಸಿನಿಂದ ಹೆಸರನ್ನು ತೆಗೆಯುತ್ತೇವೆ ಎಂದು ಹೇಳಿಕೊಂಡು ಆತನಿಂದ 3 ಲಕ್ಷ ಹಣವನ್ನು ಡಿಮ್ಯಾಂಡ್ ಮಾಡಿ ಹಂತ ಹಂತವಾಗಿ ಒಟ್ಟು 2,95,000 ಹಣವನ್ನು ಪಡೆದುಕೊಂಡಿದ್ದರು. ಈ ಹಣವನ್ನು ಪಡೆದ ಬಳಿಕ ಹಣ ನೀಡಿದ ವ್ಯಕ್ತಿಯನ್ನು ಪೊಲೀಸರು ಹುಡುಕಾಡುತ್ತಿದ್ದ ವಿಚಾರವನ್ನು ತಿಳಿದ ಆತ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದನು.
ಇನ್ನು ಇದಾದ ನಂತರ ಆತನಿಂದ ಹಣ ಪಡೆದುಕೊಂಡ ವ್ಯಕ್ತಿಗಳಿಂದ ಹಣವನ್ನು ವಾಪಾಸ್ಸು ನೀಡುವಂತೆ ತಿಳಿಸಿದಾಗ ಹಣದ ವಿಚಾರದಲ್ಲಿ ಕರೆ ಮಾಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ನಂತರ ರೂ. 30,000 ಹಣವನ್ನು ನೀಡುವಂತೆ ಬೇಡಿಕೆಯಿಟ್ಟಿದ್ದು, ಇದರಿಂದ ಹಣವನ್ನು ಸುಲಿಗೆ ಮಾಡಿದ ಆರೋಪಿಗಳ ವಿರುದ್ಧ ಹಣವನ್ನು ಕಳೆದುಕೊಂಡ ವ್ಯಕ್ತಿಯು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.
ಅಬ್ದುಲ್ ಖಾದರ್ ರಿಝ್ವಾನ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ಸಮಯ ಆರೋಪಿಯು ಇನ್ನೋರ್ವ ಆರೋಪಿಯ ಜೊತೆ ಸೇರಿಕೊಂಡು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಹೆಸರನ್ನು ತೆಗೆಯಲು ಸುರತ್ಕಲ್ ಹಾಗೂ ಪಾಂಡೇಶ್ವರ ಪೊಲೀಸರ ಜೊತೆ ಪ್ರಭಾವ ಬೀರಿ ಮಾತುಕತೆ ನಡೆಸಿ ಕೇಸಿನಿಂದ ಹೆಸರನ್ನು ತೆಗೆಯುತ್ತೇವೆ ಎಂದು ನಂಬಿಸಿ ಹಲವು ಕಂತುಗಳಲ್ಲಿ ಒಟ್ಟು 2,95,000 ಹಣವನ್ನು ಸುಲಿಗೆ ಮಾಡಿದ್ದರು.
ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯು ಭಾಗಿಯಾಗಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ.