ಸುರತ್ಕಲ್, ಮೇ 14 (DaijiworldNews/DB): ಸುರತ್ಕಲ್ ಬೀಚ್, ದೊಡ್ಡಕೊಪ್ಲದಲ್ಲಿ ಭಾರೀ ಪ್ರಮಾಣದಲ್ಲಿ ತೈಲಜಿಡ್ಡು ಕಂಡು ಬಂದಿದ್ದು, ನಡೆದಾಡುವಾಗ ಕಾಲಿಗೆ ಅಂಟಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು.
ಸಮುದ್ರದ ಅಲೆಗಳಲ್ಲಿ ಜಿಡ್ಡು ತೇಲಿ ಬರುತ್ತಿತ್ತಲ್ಲದೇ, ನೀರು ಗ್ರೀಸ್ನಂತೆ ಕಂಡು ಬಂದಿತ್ತು. ಬೃಹತ್ ಹಡಗುಗಳು ನಿಲುಗಡೆಯಾಗುವ ವೇಳೆ ತೈಲ ಜಿಡ್ಡಿನ ತ್ಯಾಜ್ಯವನ್ನು ಸಮುದ್ರಕ್ಕೆ ಬಿಡುತ್ತಿರುವ ಕಾರಣ ಸಮುದ್ರದ ನೀರಿನೊಂದಿಗೆ ತೈಲ ಜಿಡ್ಡು ಸೇರುತ್ತಿದೆ ಎನ್ನಲಾಗುತ್ತಿದೆ. ಬಂದರಿನ ಒಳಭಾಗದಲ್ಲಿ ತ್ಯಾಜ್ಯ ವಿಲೇವಾರಿಗೆ ಶುಲ್ಕ ಪಾವತಿ ಕಾರಣದಿಂದಾಗಿ ಅದನ್ನು ಮಾಡದೇ ಸಮುದ್ರದಲ್ಲಿಯೇ ಜಿಡ್ಡು ತ್ಯಾಜ್ಯವನ್ನು ಬೃಹತ್ ಹಡಗುಗಳು ಬಿಡುತ್ತಿವೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಇಂತಹ ತೈಲ ಜಿಡ್ಡಿನ ಅಂಶಗಳು ಸಮುದ್ರದಲ್ಲಿ ಕಂಡು ಬರುತ್ತವೆ. ಆದರೆ ಈ ಬಾರಿ ಚಂಡಮಾರುತದಿಂದಾಗಿ ಬೇಗನೇ ಪತ್ತೆಯಾಗಿದೆ ಎಂದೂ ಹೇಳಲಾಗುತ್ತಿದೆ.