ಬೆಳ್ತಂಗಡಿ, ಅ27(SS): ಸಾವಿರಾರು ವರುಷಗಳ ಇತಿಹಾಸವಿರುವ ಶಬರಿಮಲೆ ಸೇರಿದಂತೆ ಹಿಂದೂ ಧರ್ಮದ ಗತ ಕಾಲದ ಸಂಪ್ರದಾಯಗಳನ್ನು ಮುರಿದು ಹಾಕಲು ಬಹುದೊಡ್ಡ ಷಡ್ಯಂತ್ರವೇ ನಡೆಯುತ್ತಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.
ಶಬರಿಮಲೆ ವಿವಾದ ಕುರಿತು ದಾಯ್ಜಿವರ್ಲ್ಡ್ ವಾಹಿನಿಗೆ ಪ್ರತಿಕ್ರಿಯೆ ನೀಡಿದ ಅವರು, ಶಬರಿಮಲೆ ಪುಣ್ಯಕ್ಷೇತ್ರ. ಆದರೆ ಇದೀಗ ಅಯ್ಯಪ್ಪನ ದಿವ್ಯ ಸನ್ನಿಧಿಯಲ್ಲಿ ಸಂಪ್ರದಾಯಗಳು ಮುರಿದು ಬೀಳುತ್ತಿದೆ. ನಿಷ್ಠೆ ಇಲ್ಲದ ಜನರಿಂದ ಸಂಸ್ಕೃತಿ ಸಂಪ್ರದಾಯಗಳು ನಾಶವಾಗುತ್ತಿದೆ. ಶಬರಿಮಲೆಯಲ್ಲಿ ಹಿರಿಯರು ಅನುಸರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಉಳಿಸಿಕೊಂಡು ಹೋಗುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಬರಿಮಲೆ ವಿಚಾರದಲ್ಲಿ ಬೇರೆ ಧರ್ಮದ ಜನರಿಗೆ ಆಸಕ್ತಿ ಹೆಚ್ಚಾಗಿದೆ. ಸಂಪ್ರದಾಯ ಮುರಿದು ಹಾಕುವ ಬಹುದೊಡ್ಡ ಷಡ್ಯಂತ್ರವನ್ನು ಇತರ ಧರ್ಮದವರು ಸೇರಿ ಮಾಡುತ್ತಿದ್ದಾರೆ. ಚರ್ಚ್, ಮಸೀದಿ ವಿಚಾರದಲ್ಲಿ ನಾವು ಮೂಗು ತೂರಿಸುವುದಿಲ್ಲ. ಹೀಗಿರುವಾಗ ಹಿಂದೂ ಧರ್ಮದ ಮೇಲೆ ಇತರ ಧರ್ಮದವರಿಗೆ ಯಾಕೆ ಕಣ್ಣು ಎಂದು ಪ್ರಶ್ನಿಸಿದ್ದಾರೆ.
ಶಬರಿಮಲೆಯ ಸಂಪ್ರದಾಯವನ್ನು ಮುರಿಯುವುದರಿಂದ ಅಯ್ಯಪ್ಪ ಭಕ್ತರು ಮತ್ತು ಹಿಂದೂ ಧರ್ಮದ ಜನರ ಭಾವನೆಗಳಿಗೆ ನೋವಾಗುತ್ತದೆ. ಈ ವಿವಾದವನ್ನು ಸುಲಭವಾಗಿ ಸರಿಪಡಿಸಬಹುದಿತ್ತು. ಕೋರ್ಟ್ ಮೆಟ್ಟಲು ಹತ್ತದಂತೆ ನೋಡಿಕೊಳ್ಳಬಹುದಿತ್ತು. ಶಬರಿಮಲೆಯ ಶತಮಾನಗಳ ಪುರಾತನ ನಂಬಿಕೆ, ಆಚರಣೆಗಳು ಎಲ್ಲಾ ಜಾತಿಯ ಜನರಿಂದ ಸ್ವೀಕಾರವಾಗಿದೆ. ಹೀಗಾಗಿ ಭಕ್ತರ ನಂಬಿಕೆ ಮತ್ತು ಆಚರಣೆಗಳನ್ನು ನ್ಯಾಯಾಲಯಗಳು ನಿರ್ಧರಿಸಲಾಗದು ಎಂದು ಹೇಳಿದರು.
ಶಬರಿಮಲೆಯ ದರ್ಶನ ಮಾಡಬೇಕಾದರೆ ಅನೇಕ ನಿಯಮಗಳಿವೆ. 48 ದಿನಗಳ ಕಠಿಣ ವ್ರತವನ್ನು ಅನುಸರಿಸಿ ಮನಶುದ್ದಿಯನ್ನು ಪಡೆದು ಶಬರಿಮಲೆಗೆ ಹೋಗಿ ದರ್ಶನ ಪಡೆಯುವುದು ನಮ್ಮ ಸಂಪ್ರದಾಯವಾಗಿತ್ತು. ಆದರೆ ಇದೀಗ ಅದನ್ನೆಲ್ಲ ಬದಲಿಸಿ ನಾಲ್ಕು ದಿನ ಎರಡು ದಿನ ವೃತಮಾಡಿ ಶಬರಿಮಲೆಗೆ ಹೋಗುತ್ತಿದ್ದಾರೆ. ಇದು ಸರಿಯಲ್ಲ. ಇಲ್ಲಿ ಹಿರಿಯರು ಹಾಕಿಕೊಂಡು ಬಂದಿರುವ ಸಂಪ್ರದಾಯಗಳು ಉಳಿದರೆ ಅದೇ ಒಳ್ಳೆಯದು ಎಂದು ತಿಳಿಸಿದ್ದಾರೆ.
ಶಬರಿಮಲೆ ಕ್ಷೇತ್ರದಲ್ಲಿ ತನ್ನದೇ ಆದ ಸಂಪ್ರದಾಯ, ಪದ್ಧತಿಗಳಿವೆ. ಅವುಗಳನ್ನು ಒಮ್ಮೆಲೇ ಬದಲಾಯಿಸಲು ಆಗುವುದಿಲ್ಲ. ಸುಪ್ರೀಂಕೋರ್ಟ್ ತೀರ್ಪನ್ನು ಮರುಪರಿಶೀಲಿಸಿ, ಬದಲಾಯಿಸಬೇಕು ಎಂದು ಹೇಳಿದರು.