ಕಾಸರಗೋಡು, ಮೇ 12 (DaijiworldNews/HR): ದುಬೈಯಲ್ಲಿ ಇತ್ತೀಚೆಗೆ ನಿಗೂಢವಾಗಿ ಮೃತಪಟ್ಟಿರುವ ಯೂಟ್ಯೂಬರ್, ಮಳಿಯಾಳಿ ವ್ಲಾಗರ್ ರಿಫಾ ಮೆಹ್ನು ಅವರ ಮೃತದೇಹವನ್ನು ಕೋಝಿಕ್ಕೋಡ್ ಬಳಿಯ ಮಸೀದಿಯ ಸ್ಮಶಾನದಿಂದ ಹೊರತೆಗೆದ ಐದು ದಿನಗಳ ನಂತರ ಆಕೆಯ ಪತಿಗೆ ನೋಟಿಸ್ ನೀಡಿನ ಪೊಲೀಸ್ ತನಿಖಾ ತಂಡದ ಮುಂದೆ ಹಾಜರಾಗುವಂತೆ ಆದೇಶಿಸಲಾಗಿದೆ.
ವ್ಲಾಗರ್ ರಿಫಾ ಮೆಹ್ನು ಮಾರ್ಚ್ 1 ರಂದು ದುಬೈನಲ್ಲಿ ಶವವಾಗಿ ಪತ್ತೆಯಾಗಿದ್ದು, ಅಲ್ಲಿ ಅವಳು ತನ್ನ ಪತಿ ಮೆಹನಾಜ್ ಮತ್ತು ಎರಡು ವರ್ಷದ ಮಗನೊಂದಿಗೆ ವಾಸಿಸುತ್ತಿದ್ದಳು.
ಆಕೆಯ ಪತಿ ಮೆಹನಾಜ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ರಿಫಾ ಮೆಹ್ನು ಕುಟುಂಬಸ್ಥರು ಆರೋಪಿಸಿರುವ ಹಿನ್ನಲೆಯಲ್ಲಿ ತನಿಖಾ ತಂಡವು ಮೆಹನಾಜ್ ಗೆ ನೋಟಿಸ್ ನೀಡಿದೆ.
ಇನ್ನು ಇನ್ಟಾಗ್ರಾಮ್ ನಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿರುವ ರಿಫಾ, ಶವವಾಗಿ ಪತ್ತೆಯಾಗುವ ಒಂದು ದಿನದ ಮೊದಲು ಪೋಸ್ಟ್ ಮಾಡಿದ ಕೊನೆಯ ವೀಡಿಯೊದಲ್ಲಿ ಅವರು ತಮ್ಮ ಪತಿಯೊಂದಿಗೆ ದುಬೈನ ರೆಸ್ಟೋರೆಂಟ್ನಲ್ಲಿದ್ದರು ಎನ್ನಲಾಗಿದೆ.
ಮಾರ್ಚ್ 1 ರಂದು ರಿಫಾ ಶವವಾಗಿ ಪತ್ತೆಯಾಗಿದ್ದು, ನಂತರ ಪಾರ್ಥಿವ ಶರೀರವನ್ನು ದುಬೈನಿಂದ ತಂದು ಕೋಝಿಕ್ಕೋಡ್ಗೆ ತಂದು ಮಸೀದಿಯಲ್ಲಿರುವ ಸ್ಮಶಾನದಲ್ಲಿ ಹೂಳಲಾಗಿತ್ತು. ಆದರೆ ರಿಫಾ ಅವರ ಪೋಷಕರು ತಮ್ಮ ಮಗಳ ನಿಗೂಢ ಸಾವಿನ ಬಗ್ಗೆ ದೂರು ದಾಖಲಿಸಿದ್ದು, ಆ ಬಳಿಕ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ನಡೆಸಲು ನಿರ್ಧರಿಸಿದೆ.
ಇನ್ನು ಶವಪರೀಕ್ಷೆಯ ಸಂಪೂರ್ಣ ವರದಿ ಶೀಘ್ರದಲ್ಲೇ ಬರಲಿದ್ದು, ಸಂಶೋಧನೆಗಳ ಆಧಾರದ ಮೇಲೆ ತನಿಖೆಯಲ್ಲಿ ಮುಂದುವರಿಯಲು ತನಿಖಾ ತಂಡವು ಕಾಯುತ್ತಿದೆ.