ಕುಂದಾಪುರ, ಜ 05(SM): ಯುವತಿಯನ್ನು ನಂಬಿಸಿ ಅತ್ಯಾಚಾರವೆಸಗಿ ಬಳಿಕ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಕೃತ್ಯ ಸಾಬೀತಾಗಿದ್ದು, ಆತ ದೋಷಿ ಎಂದು ತೀರ್ಮಾನಿಸಿ ಕುಂದಾಪುರದಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಅಂಪಾರಿನ ಮೂಡುಬಗೆಯ ವಿಘ್ನೇಶ್ವರ (32) ಪ್ರಕರಣದ ಆರೋಪಿ.
ಪ್ರಕರಣದ ವಿವರ:
2011ರ ಜೂನ್ 2ರಂದು ಸಂತ್ರಸ್ತ ಯುವತಿಯ ಮನೆಗೆ ಬಂದು ನನ್ನ ಪೋಷಕರು ನಿನ್ನನ್ನು ನೋಡಲು ಬರ ಹೇಳಿದ್ದಾರೆ ಎಂದು ನಂಬಿಸಿ ಆಕೆಯನ್ನು ತನ್ನ ಮನೆಯಾದ ಅಂಪಾರಿನ ಮೂಡುಬಗೆ ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದ. ಮನೆ ತೋರಿಸುವ ನೆಪದಲ್ಲಿ ಆಕೆಯನ್ನು ಬಲವಂತದ ಪಡಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದ.
ಅದೇ ವರ್ಷದ ನವಂಬರ್ 15ರಂದು ಜೋಗ್ ಫಾಲ್ಸ್ ನೋಡುವ ನೆಪದಲ್ಲಿ ಕರೆದುಕೊಂಡು ಹೋಗಿದ್ದ ಆರೋಪಿ ಸಾಗರದ ವಸತಿ ಗೃಹದ ಕೊಠಡಿಯೊಂದರಲ್ಲಿ ಆಕೆಯ ಮೇಲೆ ಬಲಾತ್ಕಾರ ನಡೆಸಿದ್ದ. ಮದುವೆಯಾಗುವುದಾಗಿ ನಂಬಿಸಿದ್ದ ಆತ ಬಳಿಕ ಮದುವೆಗೆ ನಿರಾಕರಣೆ ಮಾಡಿದ್ದ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಆರೋಪಿ ಜಾಮೀನು ಪಡೆದುಕೊಂಡಿದ್ದ. ಪ್ರಕರಣದ ತನಿಖೆ ನಡೆಸಿದ್ದ ಕುಂದಾಪುರದ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. 12 ಸಾಕ್ಷಿಗಳ ವಿಚಾರಣೆ ನಡೆದಿತ್ತು.
ವಿಚಾರಣೆ ನಡೆಸಿದ್ದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಐಪಿಸಿ ದಂಡ ಸಂಹಿತಿ 417 ಹಾಗೂ ಐಪಿಸಿ 376 ಅನ್ವಯ ಆರೋಪಿಯ ವಿರುದ್ದ ಮಾಡಲಾಗಿರುವ ಆರೋಪ ಸಾಬೀತಾಗಿದೆ ಎಂದು ತೀರ್ಪು ಪ್ರಕಟಿಸಿದ್ದಾರೆ. ಶಿಕ್ಷೆ ಪ್ರಮಾಣದ ಕುರಿತು ಆರೋಪಿಯ ಪರ ವಕೀಲರು ವಾದ ಮಂಡನೆಗೆ ಅವಕಾಶ ಕೇಳಿದ್ದು, ನ್ಯಾಯಾಲಯ ಜ.8 ಕ್ಕೆ ದಿನ ನಿಗದಿ ಮಾಡಿದೆ.