ಹಿರಿಯಡ್ಕ, ಮೇ 11 (DaijiworldNews/SM): ತಾಯಿ ಮಗಳನ್ನು ಕೊಲೆಗೈದ ಪ್ರಕರಣ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಚೆಲುವಿಯ ದೂರದ ಸಂಬಂಧಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಹರೀಶ್ ಆರ್. ಯಾನೆ ಗಣೇಶ (29) ಬಂಧಿತ ಆರೋಪಿ. ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಅತ್ರಾಡಿ ಗ್ರಾಮದ ಮದಗ ಮುಳ್ಳಗುಜ್ಜೆ ಎಂಬಲ್ಲಿ ಮೇ 8ರಂದು ರಾತ್ರಿ ವೇಳೆ ತಾಯಿ ಮಗಳ ಜೋಡಿ ಕೊಲೆ ನಡೆದಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಯನ್ನು 48 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹರೀಶ್, ಮೃತ ಚೆಲುವಿಯ ದೂರದ ಸಂಬಂಧಿಯಾಗಿದ್ದು, ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಗಂಡನಿಂದ ದೂರವಾಗಿರುವ ಅವಕಾಶವನ್ನು ಉಪಯೋಗಿಸಿಕೊಂಡು ಚೆಲುವಿಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ಚೆಲುವಿಯನ್ನು ಮದುವೆ ಆಗುವಂತೆ ಆರೋಪಿ ಒತ್ತಾಯಿಸುತ್ತಿದ್ದನು. ಆದರೆ, ಚೆಲುವಿಯು ಬೇರೆ ಗಂಡಸರೊಂದಿಗೆ ಫೋನಿನಲ್ಲಿ ಮಾತನಾಡುತ್ತಿರುವ ಬಗ್ಗೆ ಸಂಶಯದಿಂದ ದ್ವೇಷಗೊಂಡಿದ್ದ ಆರೋಪಿ ಹರೀಶ್. ಮೇ 8ರಂದು ಕೂಡಾ ರಾತ್ರಿ ಚೆಲುವಿಯ ಮನೆಗೆ ಬಂದಿದ್ದ ಆರೋಪಿ. ಆ ದಿನ ಚೆಲುವಿಯ ಮನೆಯಲ್ಲಿ ಊಟ ಮಾಡಿ ಮಗಳು ಮಲಗಿದ ಬಳಿಕ ಚೆಲುವಿ ಬೇರೆಯವರೊಂದಿಗೆ ಫೋನ್ ನಲ್ಲಿ ಸಂಪರ್ಕದಲ್ಲಿರುವ ವಿಚಾರದಲ್ಲಿ ತಗಾದೆ ತೆಗೆದು ಗಲಾಟೆ ಮಾಡಿದ್ದನು. ಆ ಬಳಿಕ, ಚೆಲುವಿ ಮಲಗಿದ್ದ ವೇಳೆ ಚೆಲುವಿಯನ್ನು ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ನಂತರ ನಿದ್ರೆಯಲ್ಲಿದ್ದ ಮಗಳು ತನ್ನ ವಿರುದ್ಧ ಸಾಕ್ಷಿ ಹೇಳಬಹುದೆಂದು ಅವಳನ್ನು ಕೂಡಾ ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದನು ಎಂದು ತನಿಖೆಯಿಂದ ತಿಳಿದುಬಂದಿದೆ. ಕೊಲೆ ಮಾಡಿದ ನಂತರ ಚೆಲುವಿಯ ಕುತ್ತಿಗೆಯಲ್ಲಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಚಿನ್ನದ ಸರ ಹಾಗೂ ಮೃತಳು ಉಪಯೋಗಿಸುತ್ತಿದ್ದ ಮೊಬೈಲ್ ಪೋನ್ ಅನ್ನು ಹರೀಶ್ ಸುಲಿಗೆ ಮಾಡಿಕೊಂಡು ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು, ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಹಿರಿಯಡ್ಕ ಎಸ್ಸೈ ಅನಿಲ್ ಬಿ.ಮಾದರ, ಕೋಟ ಎಸ್ಸೈ ಮಧು ಬಿ.ಇ. ಪ್ರೊಬೆಷನರಿ ಎಸ್ಸೈಗಳಾದ ಮಂಜುನಾಥ, ರವಿ ಬಿ.ಕಾರಗಿ ಸಿಬ್ಬಂದಿ ರಾಘವೇಂದ್ರ ಮತ್ತು ನಿತಿನ್ ಅವರ ವಿಶೇಷ ತಂಡವು ಪ್ರಕರಣ ದಾಖಲಾಗಿ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದೆ. ಪ್ರಕರಣವನ್ನು ಅತೀ ಶೀಘ್ರವಾಗಿ ಪತ್ತೆಹಚ್ಚಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ತಂಡವನ್ನು ಅಭಿನಂದಿಸಿದ್ದಾರೆ.