ಕುಂದಾಪುರ, ಮೇ 11 (DaijiworldNews/DB): ಸೌಕೂರು ಹಾಗೂ ಸಿದ್ದಾಪುರದಲ್ಲಿ ಎರಡು ಪ್ರಮುಖ ನೀರಾವರಿ ಯೋಜನೆಗಳು ಕಾರ್ಯಗತವಾಗಲಿವೆ. ಸೌಕೂರು ನೀರಾವರಿ ಯೋಜನೆಯ ಬಹುತೇಕ ಕಾಮಗಾರಿ ಮುಗಿದಿದ್ದು, ಪ್ರಾಯೋಗಿಕ ನೆಲೆಯಲ್ಲಿ ನೀರು ಹರಿಸಲಾಗುತ್ತಿದೆ. ಶೀಘ್ರದಲ್ಲಿ ಉದ್ದೇಶಿತ ಯೋಜನೆಗಳಿಗೆ ನೀರುಣಿಸಲಾಗುವುದು. 1200 ಹೆಕ್ಟೇರ್ ಪ್ರದೇಶಗಳಿಗೆ ನೀರೊದಗಿಸುವ 165 ಕೋಟಿ ರೂ. ವೆಚ್ಚದ ಸಿದ್ದಾಪುರ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಸದ್ಯದಲ್ಲಿ ಡಿಪಿಆರ್ ಆಗಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಕೊಲ್ಲೂರು ಸಮೀಪದ ಹಾಲ್ಕಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಒಂದೇ ಸರ್ಕಾರದ ಅವಧಿಯಲ್ಲಿ ಸೌಕೂರು ನೀರಾವರಿ ಯೋಜನೆ ದಾಖಲೆಯ ಅವಧಿಯಲ್ಲಿ ಪೂರ್ಣಗೊಳ್ಳುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ 2.69 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲು 596 ಕೋಟಿ ರೂ. ವೆಚ್ಚದಲ್ಲಿ ರೂಪಿಸಿರುವ ಬಹುಗ್ರಾಮ ಯೋಜನೆಯ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿ ನಡೆಯಲಿದೆ. 100 ಕೋಟಿ ರೂ. ವೆಚ್ಚದಲ್ಲಿ ಹಳ್ಳಿಹೊಳೆ-ಕಬ್ಬಿನಾಲೆ ಸೇತುವೆ, 15.42 ಕೋಟಿ ರೂ. ವೆಚ್ಚದಲ್ಲಿ ಶಂಕರನಾರಾಯಣ-ಸೌಡ ಸೇತುವೆ ನಿರ್ಮಾಣದ ಕಾರ್ಯಗಳು ನಡೆಯಲಿದೆ. ಕೊಲ್ಲೂರಿನ 33/11 ಕೆ.ವಿ ಸಾಮರ್ಥ್ಯದ ಸಬ್ ಸ್ಟೇಷನ್ ತೊಡಕುಗಳು ನಿವಾರಣೆಯಾಗಿದ್ದು ಶೀಘ್ರದಲ್ಲಿ ಉದ್ಘಾಟನೆ ಕಾರ್ಯ ನಡೆಯಲಿದೆ ಎಂದರು.
ರಾಷ್ಟ್ರೀಯ ಪರ್ವತ್ ಮಾಲ್ ಯೋಜನೆಯಡಿಯಲ್ಲಿ ದೇಶದ ಪ್ರಮುಖ 10 ಪರ್ವತ ಪ್ರದೇಶಗಳಿಗೆ ರೋಪ್ ವೇ ನಿರ್ಮಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಿದ್ದ ರಾಜ್ಯದ 15 ಯೋಜನೆಗಳ ಪೈಕಿ ಅಂಜನಾದ್ರಿ ಬೆಟ್ಟ ಹಾಗೂ ಕೊಡಚಾದ್ರಿಗೆ ರೋಪ್ ವೇ ನಿರ್ಮಾಣಕ್ಕೆ ಒಪ್ಪಿಗೆ ದೊರಕಿದ್ದು, ಶೀಘ್ರ ಆದೇಶ ಪತ್ರ ಸಿಗಲಿದೆ. ಇದರಿಂದ ಪ್ರವಾಸೋದ್ಯಮ ಅಭಿವೃಧ್ಧಿಯಾಗಲಿದೆ. ಕೊಡಚಾದ್ರಿಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾಪವನ್ನು ಕೈ ಬಿಡಲಾಗಿದ್ದು, ಬೆಟ್ಟಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಸ್ವಾತಂತ್ರ್ಯ ದೊರೆತು 75 ವರ್ಷವಾಗಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 75 ಕೆರೆಗಳ ಅಭಿವೃದ್ಧಿಗಾಗಿ ಅಮೃತ ಸರೋವರ ಯೋಜನೆ ರೂಪಿಸಲಾಗಿದ್ದು, ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೊಂದು ಕೆರೆಗಳ ಅಭಿವೃದ್ಧಿ ಕಾರ್ಯ ನಡೆಸಲಾಗುವುದು. ಇದಕ್ಕಾಗಿ ಸರ್ಕಾರ, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಎನ್ಆರ್ಐ ಹಾಗೂ ಸಾರ್ವಜನಿಕರ ಸಹಕಾರ ಪಡೆದುಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಸೋಮೇಶ್ವರ ಹಾಗೂ ಮರವಂತೆ ಬೀಚ್ ಅಭಿವೃದ್ಧಿ ಯೋಜನೆಯ ಕಾಮಗಾರಿಗಳು ಕುಂಠಿತವಾಗಲು ಅಧಿಕಾರಿಗಳ ಇಚ್ಛಾ ಶಕ್ತಿಯ ಕೊರತೆಯೇ ಕಾರಣ. ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆಗಳ ಶೀಘ್ರವೇ ಬಗೆಹರಿಯುವ ವಿಶ್ವಾಸವಿದೆ. ನಿಟ್ಟೂರು-ಬೆಕ್ಕೋಡಿ-ಆಡುಗೋಡಿ ಮೂಲಕ ಹೊಸನಗರ ಮಾವಿನಕೊಪ್ಪಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಪ್ರಸ್ತಾಪ ಮಂಡಿಸಲಾಗಿದ್ದು, ಇದರಿಂದ ಹೊಸನಗರ ಮೂಲಕ ಶಿವಮೊಗ್ಗ ತಲುಪುವ ದೂರ ಹಾಗೂ ಸಮಯ ಉಳಿತಾಯವಾಗಲಿದೆ. ಶರಾವತಿ ನದಿಗೆ ಅಡ್ಡಲಾಗಿ ಹಸಿರುಮಕ್ಕಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಯ ಕಾರ್ಯವೂ ಶೀಘ್ರ ಮುಕ್ತಾಯವಾಗಲಿದ್ದು, ಇದರಿಂದಲೂ ಕೊಲ್ಲೂರು, ಸಾಗರ, ಶಿವಮೊಗ್ಗ ಮಾರ್ಗದ ದೂರ ಕಡಿಮೆಯಾಗಲಿದೆ ಎಂದರು.
ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಪ್ರತಿ 12 ವರ್ಷಗಳಿಗೊಮ್ಮೆ ದೇವಸ್ಥಾನಗಳ ಅಷ್ಟಬಂಧ ಮಹೋತ್ಸವ ನಡೆಯುವುದು ವಾಡಿಕೆ. 2002ರಲ್ಲಿ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಅಷ್ಟಬಂಧ ನಡೆದಿತ್ತು. ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ದೇವಸ್ಥಾನಕ್ಕೆ ಇದೀಗ ನೂತನ ವ್ಯವಸ್ಥಾಪನಾ ಸಮಿತಿ ಇದ್ದು, ಉತ್ತರಾಯಣದ ನಂತರ ಈ ಕಾರ್ಯವನ್ನು ಸಂಘಟಿಸುವ ಕುರಿತು ವಿಮರ್ಶೆ ಮಾಡಲಾಗುವುದು ಎಂದರು.
ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 70 ವರ್ಷಗಳಲ್ಲಿ ಆಗದೆ ಇರುವಷ್ಟು ರಸ್ತೆಗಳು, ಸಂಪರ್ಕ ಸೇತುವೆಗಳು, ವೆಂಟೆಂಡ್ ಡ್ಯಾಂ, ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಇಲ್ಲಿನ ಸಮುದ್ರ ಕಿನಾರೆ ಹಾಗೂ ಮಲೆನಾಡು ಭಾಗಗಳು ಅಭಿವೃದ್ದಿಯಾದರೆ ಗೋವಾ ಮಾದರಿಯಲ್ಲಿ ಬೈಂದೂರು ಪ್ರವಾಸೋದ್ಯಮದ ಮೆಚ್ಚಿನ ತಾಣವಾಗುತ್ತದೆ ಎಂದು ಅವರು ತಿಳಿಸಿದರು.
ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ಕುಮಾರ ಶೆಟ್ಟಿ, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ, ಉದ್ಯಮಿ ವೆಂಕಟೇಶ್ ಕಿಣಿ ಬೈಂದೂರು ಉಪಸ್ಥಿತರಿದ್ದರು.