ಬಂಟ್ವಾಳ, ಜ 04(SM): ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆಗೆ ದಾಳಿ ನಡೆಸಿದ ಪುಂಜಾಲಕಟ್ಟೆ ಎಸ್. ಐ.ಸೌಮ್ಯ ನೇತೃತ್ವದ ತಂಡ ಆರೋಪಿಗಳ ಸಹಿತ ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಡಗಕಜೆಕಾರು ನಿವಾಸಿಗಳಾದ ಇಸಾಕ್, ಅಸ್ಬಾಲ್, ಮೊಹಮ್ಮದ್ ಶಾಕೀರ್, ಮಹಮ್ಮದ್ ಶರೀಫ್ ಬಂಧಿತ ಆರೋಪಿಗಳಾದರೆ ಉಳಿದಂತೆ ಓರ್ವ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಗಳಿಂದ ಎರಡು ಬೈಕ್ ಸಹಿತ 61 ಸಾವಿರದ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಕೆದಿಲ ಎಂಬಲ್ಲಿ ಆರೋಪಿ ಉಮ್ಮರಬ್ಬನ ಮನೆಯ ಪಕ್ಕದ ಶೆಡ್ಡಿನಲ್ಲಿ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾಡಿ ಮಾರಟ ಮಾಡಲು ಯತ್ನಿಸಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಅಂದಾಜು 50 ಕೆ.ಜಿ. ಜಾನುವಾರು ಮಾಂಸ, ಕೃತ್ಯಕ್ಕೆ ಉಪಯೋಗಿಸಿದ ಸಲಕರಣೆ ಹಾಗೂ ಸಾಗಾಟಕ್ಕೆ ಬಳಸಿದ ಎರಡು ಬೈಕ್ ವಶಪಡಿಸಿಕೊಂಡಿದ್ದಾರೆ.