ಮಂಗಳೂರು, ಮೇ 11 (DaijiworldNews/DB): ಧ್ವನಿವರ್ಧಕ ಬಳಕೆ ಕುರಿತಂತೆ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮೊಹಮ್ಮದ್ ಮಸೂದ್ ಸ್ವಾಗತಿಸಿದ್ದಾರೆ. ಸರ್ಕಾರ ಹೊರಡಿಸಿದ ನಿಯಮವನ್ನು ಮಸೀದಿಗಳಲ್ಲಿ ಪಾಲಿಸಲಾಗುವುದು ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಬುಧವಾರ ಮಾತನಾಡಿದ ಅವರು, ಸರ್ಕಾರದ ಆದೇಶವನ್ನು ನಾವು ಗೌರವಿಸುತ್ತೇವೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಐದು ಬಾರಿ ಆಜಾನ್ ಕೂಗುವುದನ್ನು ನಿಲ್ಲಿಸಲಾಗಿದೆ. ಉಳಿದ ಮಸೀದಿಗಳಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಲಾಗುವುದು. ಅಲ್ಲದೆ ಆಜಾನ್ನ್ನು ಅನುಮತಿ ನೀಡಿದ ಡೆಸಿಬಲ್ ಮಿತಿಯೊಳಗೆ ಮಾಡಲಾಗುವುದು ಎಂದರು.
ಮುಸ್ಲಿಂ ಸಮುದಾಯದವರನ್ನು ಭಯೋತ್ಪಾದಕರು ಎಂದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುತಾಲಿಕ್ ಅವರೇ ಭಯೋತ್ಪಾದಕ. ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಅವರ ಸಂಘಟನೆ ಶ್ರೀರಾಮಸೇನೆ ಅಲ್ಲ, ಮುತಾಲಿಕ್ರ ರಾವಣ ಸೇನೆ ಆಗಿದೆ. ಉಡುಪಿಗೆ ಅವರ ಆಗಮನ ನಿಷೇಧಿಸಲಾಗಿದೆ. ಆದರೆ ಮಂಗಳೂರಿನಲ್ಲಿಪೊಲೀಸ್ ಆಯುಕ್ತರಿಂದಲೇ ಅದ್ದೂರಿ ಸ್ವಾಗತ ಸಿಕ್ಕಿರುವುದು ಖಂಡನೀಯ ಎಂದು ತಿಳಿಸಿದರು.
ಉಪಾಧ್ಯಕ್ಷ ಅಶ್ರಫ್, ಮುಮ್ತಾಜ್ ಅಲಿ, ಬಸತಂಗಳ್, ಪುತ್ತುಹಾಜಿ ಉಪಸ್ಥಿತರಿದ್ದರು.