ಉಡುಪಿ, ಮೇ 11 (DaijiworldNews/MS): ಪ್ರಮೋದ್ ಮಧ್ವರಾಜ್ ರವರಿಗೆ ಅಲ್ಪ ಕಾಲದಲ್ಲಿ ಪಕ್ಷ ಅತೀ ಹೆಚ್ಚು ಅವಕಾಶಗಳನ್ನ ಕೊಟ್ಟಿದ್ದರೂ, ಅವರು ಅವಕಾಶವಾದಿ ರಾಜಕಾರಣಿಯಾಗಿ ಪಕ್ಷ ತೊರೆದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಪರಾಗಿರುವ ಧ್ರುವನಾರಾಯಣ್ ಆರೋಪಿಸಿದರು.
ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು," ವಿಧಾನ ಸಭಾ ಕ್ಷೇತ್ರದಿಂದ ಹಿಡಿದು, ರಾಜ್ಯದ ಶ್ರೇಣಿಯ ಎಲ್ಲ ಹುದ್ದೆಗಳನ್ನು ಅವರಿಗೆ ಪಕ್ಷ ನೀಡಿದೆ. ಕಾಂಗ್ರೆಸ್ ಸಹಾಯದಿಂದಲೇ ಜೆಡಿಎಸ್ ಅಭ್ಯರ್ಥಿಯಾದರು. ಇತ್ತೀಚಿಗೆ ಕೆಪಿಸಿಸಿ ಉಪಾಧ್ಯಕ್ಷರನ್ನಾಗಿಯೂ ಮಾಡಲಾಯಿತು. ಎಲ್ಲವನ್ನು ಪಕ್ಷ ಕೊಟ್ಟರೂ ಆತುರದಿಂದ ನಿರ್ಧಾರ ತೆಗೆದುಕೊಂಡಿದ್ದಾರೆ. ಪಕ್ಷ ಅವರಿಗೆ ಯಾವುದೇ ಅನ್ಯಾಯ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದರು
ರಾಜೀನಾಮೆ ಪತ್ರ ನೋಡಿದ್ದೇನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯವರ ಸ್ಥಾನವನ್ನು ಅವರ ಅಭ್ಯರ್ಥಿಗೆ ಕೊಡುವಂತೆ ತಿಳಿಸಿದ್ದರು. ಆ ಬೇಡಿಕೆಯನ್ನು ಈಡೇರಿಸಿದ್ದೇವೆ. ಪ್ರಮೋದ್ ಕಾಂಗ್ರೆಸ್ ಬಿಟ್ಟ ಮೇಲೆ ಕಾಂಗ್ರೆಸ್ ಬಗ್ಗೆ ಮಾತಾಡುವುದು ಶೋಭೆಯಲ್ಲ . ಎಲ್ಲಿಯೂ ಅವರಿಗೆ ಅಗೌರವ ತೋರುವ ಘಟನೆ ನಡೆದಿಲ್ಲ. ಮೊಗವೀರ ಸಮುದಾಯದ ಯುವಕ ರಾಜ್ಯ ಮಟ್ಟದಲ್ಲಿ ಬೆಳೆಯಲಿ ಎಂಬ ದೃಷ್ಟಿಯಿಂದ ಡಿಕೆಶಿಯವರು ಪ್ರಮೋದ್ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದರು. ಆದರೆ ಪಕ್ಷಕ್ಕೆ ದ್ರೋಹ ಮಾಡಿದರು. ಆದರೆ ಅವರು ಮತದಾರರು ತಲೆ ತಗ್ಗಿಸುವ ಕೆಲಸ ಮಾಡಿದರು. ಅವರ ವೈಯಕ್ತಿಕ ಆಸೆ ಏನಿತ್ತೋ ನಮಗೆ ತಿಳಿಸಿದಿಲ್ಲ. ಆದರೆ ರಾಜಕಾರಣ ನಿಂತ ನೀರಲ್ಲ. ಈಗ ಪಕ್ಷವನ್ನು ಸಂಘಟಿಸುವ ಮತ್ತು ಬಲಪಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ವಿರುದ್ದ ಕಿಡಿಕಾರಿದ ಅವರು, ನಿಮ್ಮ ಮನೆಯಲ್ಲಿ ಸಾಕಷ್ಟು ಸಮಸ್ಯೆ ಇದ್ದು ಕಾಂಗ್ರೆಸ್ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ? ಧರ್ಮವನ್ನು ಗುರಿಯಾಗಿಸಿಕೊಂಡು ನೀವು ರಾಜಕೀಯ ಮಾಡುತ್ತಿದೆ,. ಪರಿಶಿಷ್ಟ ಜಾತಿ/ ಪಂಗಡಗಳ ಅನುದಾನವನ್ನು ಸರ್ಕಾರ ಕಡಿತ ಮಾಡಿದೆ. ಜನರ ಮುಂದೆ ಸುಳ್ಳು ಅಂಕಿ-ಅಂಶ ಕೊಟ್ಟು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಇನ್ನು ಸರಕಾರ ಹೊರಡಿಸಿರುವ ಅಜಾನ್ ಬಗೆಗಿನ ಆದೇಶಕ್ಕೆ ಪ್ರತಿಕ್ರಿಯೆ ನೀಡುತ್ತಾ, "ಬಿಜೆಪಿಯ ಬಗ್ಗೆ ಜನ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಎಲ್ಲವು ಹುಸಿಯಾಗಿದೆ. ರಾಜ್ಯದ ನೆಮ್ಮದಿಯನ್ನು ಹಾಳುಮಾಡಿದ್ದಾರೆ. ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡುತ್ತಿದ್ದಾರೆ. ಇವರ ಎಲ್ಲಾ ಆರೋಪಗಳನ್ನು ಭ್ರಷ್ಟಾಚಾರಗಳನ್ನು ಮುಚ್ಚಿ ಹಾಕಲು ಅಜಾನ್ , ಹಲಾಲ್ ಅಂತಹ ಕೋಮು ವಿಚಾರಗಳನ್ನು ಎತ್ತಿ ಕಟ್ಟುತ್ತಿದ್ದಾರೆ.ದೇವಸ್ಥಾನಗಳಲ್ಲಿ ಭಜನೆ ಮಾಡಿದ್ರೆ ಯಾರಿಗೆ ಏನು ತೊಂದರೆ, ದಶಕಗಳಿಂದ ನಡೆಸಿಕೊಂಡು ಬಂದದ್ದು ಮುಂದುವರೆಸಿಕೊಂಡು ಹೋಗಬೇಕು. ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳ್ವೆ ನಡೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ ಕುಮಾರ್ ಕೊಡವೂರು, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಯು. ಆರ್. ಸಭಾಪತಿ ವಕ್ತಾರರುಗಳಾದ ಭಾಸ್ಕರ ರಾವ್ ಕಿದಿಯೂರು, ಬಿಪಿನ್ ಚಂದ್ರಪಾಲ್ ನಕ್ರೆˌ,ಪ್ರಸಾದ್ ಕಾಂಚನ್, ಬ್ಲಾಕ್ ಅಧ್ಯಕ್ಷರುಗಳಾದ ರಮೇಶ್ ಕಾಂಚನ್ ಹಾಗೂ ದಿನಕರ ಹೇರೂರ, ವೆರೋನಿಕಾ ಕರ್ನೆಲಿಯೋ,ಹರಿಶ್ ಕಿಣಿ, ಅಬೀಬ್ ಆಲಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಬಿ. ನರಸಿಂಹಮೂರ್ತಿˌ ಪ್ರಖ್ಯಾತ ಶೆಟ್ಟಿ , ದೀಪಕ್ ಕೋಟ್ಯಾನ್ , ಅಣ್ಣಯ್ಯ ಸೇರಿಗಾರ್ , ಉಪಸ್ಧಿತರಿದ್ದರು ˌ