ಉಡುಪಿ, ಜ 04(SM): ಮಲ್ಪೆ ಬಂದರಿನಿಂದ ಕಳೆದ 20 ದಿನಗಳ ಹಿಂದೆ ತೆರಳಿದ್ದ 7 ಮಂದಿ ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟನ್ನು ಪತ್ತೆ ಹಚ್ಚಿ ಮೀನುಗಾರರನ್ನು ರಕ್ಷಿಸಿ ಕರೆತರಲು ಕರ್ನಾಟಕ ಸರಕಾರ ಮತ್ತು ಉಡುಪಿ ಜಿಲ್ಲಾಡಳಿತವು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅತೀ ಶೀಘ್ರದಲ್ಲಿಯೇ ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ವಿಶ್ವಾಸವಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವರು ಈ ಮೀನುಗಾರರ ಬೋಟ್ ನಾಪತ್ತೆಯಾದ ಸಂಗತಿ ತಿಳಿದ ತಕ್ಷಣವೇ ಕರಾವಳಿ ಕಾವಲು ಪೊಲೀಸ್, ಕೋಸ್ಟ್ ಗಾರ್ಡ್ ಮತ್ತು ಮೀನುಗಾರಿಕಾ ಇಲಾಖೆಯವರಿಗೆ ಮಾಹಿತಿ ನೀಡಿ ಅವರನ್ನು ಜಾಗೃತಗೊಳಿಸಿದ್ದೇವೆ. ಮಾತ್ರವಲ್ಲದೆ, ಈ ಎಲ್ಲಾ ವಿಭಾಗಗಳ ಸಿಬ್ಬಂದಿಗಳ ಕಾರ್ಯಪಡೆ ರಚಿಸಿ ಶೋಧನಾ ಕಾರ್ಯವನ್ನು ಅತ್ಯಂತ ಸಮಾರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಗತ್ಯವಿದ್ದೆಡೆಗಳಲ್ಲಿ ನೌಕಾದಳದವರ ಸಹಾಯವನ್ನು ಪಡೆದುಕೊಳ್ಳುವಂತೆ ಮಾರ್ಗದರ್ಶನ ಮಾಡಲಾಗಿದೆ ಎಂದರು.
ಕೇವಲ ನಮ್ಮ ಕರ್ನಾಟಕದ ವ್ಯಾಪ್ತಿಯಲ್ಲಷ್ಟೇ ಅಲ್ಲ, ಗೋವಾ ಮತ್ತು ಮಹಾರಾಷ್ಟ್ರ ವ್ಯಾಪ್ತಿಯಲ್ಲಿಯೂ ಈ ಶೋಧನಾ ಕಾರ್ಯ ಅತ್ಯಂತ ವ್ಯಾಪಕವಾಗಿ ನಡೆಸುವಂತೆ ನಿಗಾ ವಹಿಸಲಾಗಿದೆ. ಮಹಾರಾಷ್ಟ್ರದ ಬಂದರುಗಳಲ್ಲಿ ಮತ್ತು ಸಮುದ್ರ ಪ್ರದೇಶಗಳಲ್ಲಿ ಶೋಧನಾ ಕಾರ್ಯಕ್ಕೆ ಸೈನ್ಯದ ನೆರವು ಪಡೆದುಕೊಂಡು ಮುಂದುವರೆಯುವ ಸಾಧ್ಯತೆಗಳ ಬಗ್ಗೆಯೂ ಈಗಾಗಲೇ ಪರೀಶೀಲಿಸಿ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಿದ್ದತೆ ನಡೆಸಲಾಗಿದೆ. ಈ ಬಗ್ಗೆ ಸೂಕ್ತ ಅನುಮತಿ ಪಡೆಯುವ ಪ್ರಕ್ರಿಯೆ ನಡೆಸಲಾಗಿದೆ ಎಂದರು.
ಬೋಟ್ ಸಹಿತ 7 ಮಂದಿ ಮೀನುಗಾರರು ನಾಪತ್ತೆಯಾದ ಪ್ರಕರಣದ ಕುರಿತು ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ಮತ್ತು ಗೃಹ ಸಚಿವರಿಗೆ ಹಾಗೂ ಮತ್ತಿತರ ಸಂಬಂಧಪಟ್ಟವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಶೋಧನಾ ಕಾರ್ಯತಂತ್ರಗಳನ್ನು ಹೇಗೆಲ್ಲಾ ಪರಿಣಾಮಕಾರಿಯಾಗಿ ನಡೆಸಬೇಕೆಂಬ ಬಗ್ಗೆ ಇವರೆಲ್ಲರೂ ಕಾಳಜಿಯಿಂದ ಸ್ಪಂದಿಸಿ ನಿರ್ದೇಶನ ನೀಡುತ್ತಿದ್ದಾರೆ. ಅಷ್ಟೆ ಅಲ್ಲ ಗೃಹ ಸಚಿವರನ್ನು ಖುದ್ದಾಗಿ ಈ ಬಗ್ಗೆ ಪರಿಶೀಲಿಸಲು ಉಡುಪಿಗೆ ಆಗಮಿಸುವಂತೆ ನಾನು ಕೋರಿದ್ದು ಇದಕ್ಕೆ ಅವರು ಸಮ್ಮತಿಸಿ ಶನಿವಾರ ಉಡುಪಿಗೆ ಆಗಮಿಸಲಿದ್ದಾರೆ ಎಂದರು.