ಉಡುಪಿ, ಮೇ 11 (DaijiworldNews/MS): ಕಳ್ಳತನಕ್ಕೆಂದು ಮನೆಗೆ ನುಗ್ಗುವ ಕಳ್ಳರು ಇರೋಬರೋ ಸೊತ್ತುಗಳನ್ನು ದೋಚುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವಿಚಿತ್ರ ಕಳ್ಳ ಕಣ್ಣಮುಂದೆ ಗರಿಗರಿ ನೋಟು ಇದ್ದರೂ ಎಲ್ಲವನ್ನು ದೋಚದೆ, ಸ್ವಲ್ಪ ದುಡ್ಡು ಉಳಿಸಿ ಹೋದ ಘಟನೆ ನಡೆದಿದೆ. ಭದ್ರವಾಗಿ ಇರಿಸಿದ್ದ 10 ಲಕ್ಷದ ಮೂವತ್ತು ಸಾವಿರ ರೂ. ನಗದಿನ ಪೈಕಿ 8ಲಕ್ಷದ 90 ಸಾವಿರ ಎಗರಿಸಿ ಉಳಿದ ಹಣವನ್ನು ಕಳ್ಳ ಅಲ್ಲೇ ಬಿಟ್ಟು ಹೋಗಿದ್ದಾನೆ.
ಉಡುಪಿ ಜಿಲ್ಲೆಯ ಮಲ್ಪೆಯ ಕೊಳ ಎಂಬಲ್ಲಿ ಈ ಘಟನೆ ನಡೆದಿದ್ದು, ಮಲ್ಪೆ ಬಂದರಿನ ರೈಟರ್ ಆಗಿ ಕೆಲಸ ಮಾಡಿದ್ದ ಗದಗದ ಕಳಸಾಪುರ ಗ್ರಾಮದ ಸುರೇಶ ಲಮಾಣಿ ಅವರು ಈ ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸುರೇಶ ಲಮಾಣಿ ಅವರು ವಾಮನ ಕಾಂಚನ್ ಎಂಬವರ ಪಾಲುದಾರಿಕೆಯ SDDK ಮೀನು ಪಾರ್ಟಿಯಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಈ ಪಾರ್ಟಿ ವ್ಯವಹಾರಕ್ಕೆ ಸಂಬಂಧಿಸಿ ಯಾವುದೇ ಕಚೇರಿ ಇಲ್ಲದ ಕಾರಣ ಮೇ.7 ಮತ್ತು 8 ರಂದು ನಡೆಸಿದ ಮೀನು ವ್ಯಾಪಾರದಿಂದ ಬಂದ 10,30,000 ಹಣವನ್ನು ನಂತರ ವಾಮನ ಅವರಿಗೆ ನೀಡುವುದಾಗಿ ಕೊಳ ಎಂಬಲ್ಲಿರುವ ತಮ್ಮ ರೂಮಿನಲ್ಲಿ ಬಾಕ್ಸಿನ ಒಳಗೆ ಇಟ್ಟು ಬೀಗ ಹಾಕಿ ಮರುದಿನ ಬೆಳಿಗ್ಗೆ 4:30 ರ ಸುಮಾರಿಗೆ ಮೀನುಗಾರಿಕೆಗಾಗಿ ಮಲ್ಪೆ ಬಂದರಿಗೆ ಹೋಗಿದ್ದರು.
ಬಳಿಕ ಅವರು ಮೀನುಗಾರಿಕೆ ಕೆಲಸ ಮುಗಿಸಿ ವಾಪಾಸು ಬೆಳಿಗ್ಗೆ 9:30 ರ ವೇಳೆಗೆ ರೂಮಿನ ಬಳಿ ಬಂದು ನೋಡುವಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ.
ಮೇ.೯ ರ ಬೆಳಿಗ್ಗೆ ಸುರೇಶ ಅವರ ರೂಮಿನ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳ ಬಾಕ್ಸ್ ನಲ್ಲಿ ಇಟ್ಟಿದ್ದ 10,30,000 ರೂ. ಪೈಕಿ 8,90,000 ರೂ. ವನ್ನು ಕಳವು ಮಾಡಿ ಉಳಿದ ಹಣವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂಬುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.