ಮಲ್ಪೆ,ಜ 04(MSP): ಕಳೆದ 20 ದಿನಗಳಿಂದ ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರು ಸುರಕ್ಷಿತವಾಗಿ ವಾಪಾಸ್ ಮಲ್ಪೆಯ ಸಯ್ಯದೀನ್ ಅಬೂಬಕ್ಕರ್ ಸಿದ್ಧೀಕ್ ಜಾಮಿಯಾ ಮಸೀದಿಯಲ್ಲಿ ಜ.04ರ ಶುಕ್ರವಾರ ನಡೆದ ಜುಮಾ ನಮಾಝಿನ ಖುತ್ಬಾದಲ್ಲಿ ವಿಶೇಷವಾಗಿ ಪ್ರಾರ್ಥನೆ ಮಾಡಲಾಯಿತು.
ಮಸೀದಿಯ ಇಮಾಮ್ ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ `ಮಾನವೀಯ ಹಕ್ಕುಗಳು' ಎಂಬ ವಿಷಯದ ಕುರಿತ ಖುತ್ಬಾ ಪ್ರವಚನದಲ್ಲಿ ಮೀನುಗಾರಿಕೆ ತೆರಳಿದ್ದ ವೇಳೆ ನಾಪತ್ತೆಯಾಗಿರುವ ಎಲ್ಲ ಮೀನುಗಾರರು ಸುರಕ್ಷಿತವಾಗಿ ಮನೆ ಸೇರುವಂತೆ ಪ್ರಾರ್ಥನೆ ಮಾಡಿದರು.
ಮಾನವರೆಲ್ಲರು ಪರಸ್ಪರ ಸಹೋದರರು, ನಾವು ಪರಸ್ಪರ ಸುಖ-ಕಷ್ಟ ಹಂಚಿಕೊಂಡು ಬಾಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು. ಮೀನುಗಾರರ ಪತ್ತೆಗೆ ಆಗ್ರಹಿಸಿ ಮಲ್ಪೆ ಮೀನುಗಾರ ಸಂಘದ ನೇತೃತ್ವ ದಲ್ಲಿ ಜ.6ರಂದು ನಡೆಯುವ ಪ್ರತಿಭಟನೆಯಲ್ಲಿ ಮುಸ್ಲಿಮ್ ಬಾಂಧವರು ಭಾಗವಹಿಸುವಂತೆ ಇಮಾಮ್ ಮನವಿ ಮಾಡಿದರು.
ನಾಪತ್ತೆಯಾಗಿರುವ ಮೀನುಗಾರರ ಮನೆಯವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ. ನಾಪತ್ತೆಯಾಗಿರುವ ಮೀನುಗಾರರು ಆದಷ್ಟು ಬೇಗ ನಮ್ಮೊಂದಿಗೆ ಸೇರಿಕೊಳ್ಳಲಿ ಎಂದು ಅವರು ವಿಶೇಷವಾಗಿ ಪ್ರಾರ್ಥಿಸಿದರು.
`ಮಾನವೀಯ ನೆಲೆಯಲ್ಲಿ ಪರಸ್ಪರ ಸ್ಪಂದಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಮಸೀದಿಯ ಶುಕ್ರವಾರದ ಖುತ್ಬಾದಲ್ಲಿ ಮೀನುಗಾರ ಬಾಂಧವರಿಗಾಗಿ ವಿಶೇಷ ಪ್ರಾರ್ಥನೆ ಮಾಡಲಾಗಿದೆ. ಅಲ್ಲದೆ ಜ.6ರಂದು ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮುಸ್ಲಿಮ್ ಬಾಂಧವರಿಗೆ ಕರೆ ನೀಡಲಾಗಿದೆ' ಎಂದು ಮಸೀದಿಯ ಕಾರ್ಯದರ್ಶಿ ಫೈಯಾರ ಅಹ್ಮದ್ ತಿಳಿಸಿದ್ದಾರೆ.