ಉಡುಪಿ, ಮೇ 10 (DaijiworldNews/HR): ಬಿಜೆಪಿ ಪಕ್ಷ ಸಾಕಷ್ಟು ಎತ್ತರಕ್ಕೆ ಬೆಳೆದಿದೆ. ಆದರೆ ಕಾಂಗ್ರೆಸ್ ಕುಟುಂಬ ರಾಜಕಾರಣದಿಂದ ಬೆಳೆದಿಲ್ಲ. ಕಾಂಗ್ರೆಸ್ ಗೆ ಒಂದೇ ಕುಟುಂಬ ಚಿಂತನೆ. ರಾಷ್ಟೀಯ ವಿಚಾರಧಾರೆಯಡಿಯಲ್ಲಿ ಭಾರತ್ ಮಾತಾಕಿ ಜೈ ಎಂದು ಬಿಜೆಪಿಯ ಪ್ರತಿ ಕಾರ್ಯಕ್ರಮದಲ್ಲೂ ಹೇಳುತ್ತಾ ಬಂದಿದ್ದೇವೆ. ಆದರೆ ಕಾಂಗ್ರೆಸ್ ಇಂದಿರಾ ಗಾಂಧಿ ಕಿ ಜೈ, ರಾಹುಲ್ ಗಾಂಧಿಗೆ ಜೈ, ಸೋನಿಯಾ ಗಾಂಧಿಗೆ ಜೈ, ಪ್ರಿಯಾಂಕಾ ಗಾಂಧಿಗೆ ಜೈ, ಬಿಟ್ರೆ ವಾದ್ರಾ ಗೂ ಜೈ ಅಂತಾರೆ. ಕೇವಲ ಪರಿವಾರವಾದ. ರಾಷ್ಟೀಯ ಚಿಂತನೆ, ರಾಷ್ಟೀಯ ವಾದಾಗಲೇ ಇಲ್ಲ. ಪರಿವಾರವಾದದಡಿಯಲ್ಲಿ ಕಾಂಗ್ರೆಸ್ ಸತ್ತು ಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದರಾದ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಕಿದಿಯೂರು ಹೋಟೆಲಿನಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ ಭಾರತೀಯ ಜನತಾ ಪಾರ್ಟಿ ಕರ್ನಾಟಕ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಾಂಧಿ ಕುಟುಂಬದ ಸುತ್ತ ಸುತ್ತಿದರೆ ಮಾತ್ರ ಅಧಿಕಾರ ಸಿಗುತ್ತದೆ. ಗಾಂಧಿ ಕುಟುಂಬದೊಳಗೆ ಕಾಂಗ್ರೆಸ್ ಸತ್ತು ಹೋಗಿದೆ, ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಪರಿವಾರವದ ಇದು ಕಾಂಗ್ರೆಸ್ ಕೊಡುಗೆ. ಅಧಿಕಾರ ಇಲ್ಲದಿದ್ದಾಗ ದೊಂಬಿ ಎಬ್ಬಿಸುವುದು ಕಾಂಗ್ರೆಸ್ ಹುಟ್ಟು ಗುಣ ಎಂದರು.
ಉಡುಪಿ ಬಿಜೆಪಿಯ ಶಕ್ತಿ ಕೇಂದ್ರ ಮತ್ತು ಸಂಘಟನಾತ್ಮಕತೆಗೆ ಹೆಸರು ಪಡೆದಿರುವ ಜಿಲ್ಲೆ. ಆದರೆ ಇತ್ತೀಚಿಗೆ ಹಿಜಾಬ್ ವಿಚಾರ ಇಲ್ಲಿಂದ ಪ್ರಾರಂಭ ಆಯಿತು. ಬಿಜೆಪಿ ಸರ್ಕಾರ ಇಂತಹ ಎಲ್ಲ ದುಷ್ಟಶಕ್ತಿಯನ್ನು ನಿಗ್ರಹ ಮಾಡುತ್ತೆ. ನಿಯಂತ್ರಣ ಮಾಡುವ ಶಕ್ತಿ ಪಕ್ಷಕ್ಕೆ ಇದೆ. ಹಿಜಾಬ್, ಅಜಾನ್ ಮತ್ತು ಹಲಾಲ್ ಯಾವುದೇ ಇದ್ದರು ಪಕ್ಷ ಸರಿಯಾದ ಉತ್ತರ ಕೊಡುತ್ತೆ ಏನೆಂದರೆ ಒಂದೇ ಭಾರತ, ಶ್ರೇಷ ಭಾರತ ಎಂದಿದ್ದಾರೆ.
ಇನ್ನು ಮನ ಬಂದಂತೆ ಅಳುವ ರಾಜಕಾರಣ ಬಿಜೆಪಿಯಲ್ಲಿಲ್ಲ, ತುಷ್ಟಿಕರಣದ ರಾಜಕಾರಣ ಇಲ್ಲ. ಶಾಂತಿ ಭಂಗ ಪಡಿಸುವವರನ್ನು ಬಂಧಿಸುವ ಸರಕಾರ ಇದೆ. ಕಾಂಗ್ರೆಸ್ ಪಂಜಾಬ್ ನಲ್ಲಿ ಸೋತು ನಾಲಾಯಕ್ ಪಕ್ಷವಾಗಿದೆ. ಸೋನಿಯಾ ಗಾಂಧಿ ರಾಹುಲ್ ಗಾಂಧಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಶಕ್ತಿಗಳಿಲ್ಲ. ಮೋದಿ ಸರಕಾರ ಬಂದ ನಂತರ ಕಾಂಗ್ರೆಸ್ ನಿಂದ ಜನ ಹೊರಗೆ ಬಂದು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಅಧಿಕಾರವೇ ಬಿಜೆಪಿಯ ಗುರಿ ಅಲ್ಲ. ವ್ಯಕ್ತಿ ನಿರ್ಮಾಣದೊಂದಿಗೆ ರಾಷ್ಟ್ರ ನಿರ್ಮಾಣದ ಗುರಿ ಹೊಂದಿದೆ. ಬಿಜೆಪಿ ಬಂದ ನಂತರ ರಾಜ್ಯದಲ್ಲಿ ಒಂದೇ ಒಂದು ನಕ್ಸಲ್ ಚಟುವಟಿಕೆ ಇಲ್ಲ. ಕಾಂಗ್ರೆಸ್ ಗೆ ಈಗ ಬಿಜೆಪಿ ಗೆಲ್ಲುವ ಭಯ ಸೃಷ್ಟಿಯಾಗಿದೆ. ಸಿದ್ಧರಾಮಯ್ಯ ಮತ್ತು ಡಿಕೆಶಿಗೆ ಶಾಶ್ವತವಾಗಿ ನಿರುದ್ಯೋಗಿ ಆಗುವ ಆತಂಕ ಶುರುವಾಗಿದೆ. ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಆಗಾಗ ರಾಜ್ಯದಲ್ಲಿ ದೋಬಿ ಎಬ್ಬಿಸುವ ಕೆಲಸ ಮಾಡುತ್ತಾರೆ. ಅಲ್ಪ ಸಂಖ್ಯಾತರನ್ನು ಮುಸಲ್ಮಾನರನ್ನು ನಮ್ಮ ವಿರುದ್ಧ ಎತ್ತಿ ಕಟ್ಟುವ ಕೆಲಸ ಕಾಂಗ್ರೆಸ್ ಮಾಡ್ತಿದೆ ಎಂದು ಆರೋಪಿಸಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಅಂಗಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರು, ಸಂಸದರಾದ ನಳಿನ್ ಕುಮಾರ್ ಕಟೀಲ್, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರು, ಕೆ. ರಘುಪತಿ ಭಟ್, ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ ಸುನಿಲ್ ಕುಮಾರ್, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.