ಕಾರ್ಕಳ, ಮೇ 10 (DaijiworldNews/MS): ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ನಕ್ಸಲೀಯರು ನಡೆಸಿದ ಹಲವು ಕಿಮಿನಲ್ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಕೃಷ್ಣಮೂರ್ತಿ, ಸಾವಿತ್ರಿ ಅವರನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸಿ ಚಿಕ್ಕಮಗಳೂರು ಕೊಪ್ಪಕ್ಕೆ ಕರೆದೊಯ್ಯುಲಾಗಿದೆ.
ಕೇರಳದ ವಾಯನಾಡಿನಲ್ಲಿ ಅಲ್ಲಿನ ಪೊಲೀಸರು ಕೃಷ್ಣಮೂರ್ತಿ ಹಾಗೂ ಸಾವಿತ್ರಿಯನ್ನು 2021 ನವಂಬರ್ 9ರಂದು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿ ಅವರಿಬ್ಬರನ್ನು ಕೊಪ್ಪ ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಸಲ್ಲಿಸಿದ ಅರ್ಜಿಯನ್ವಯ ಕೊಪ್ಪ ಪೊಲೀಸರ ವಶಕ್ಕೆ ನೀಡಲಾಗಿತ್ತು.
ಕೊಪ್ಪ ನ್ಯಾಯಾಲಯಕ್ಕೆ ಕಾರ್ಕಳ ಪೊಲೀಸರು ಅರ್ಜಿ ಸಲ್ಲಿಸಿ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳಿಬ್ಬರನ್ನು ತಮಗೆ ಒಪ್ಪಿಸಬೇಕೆಂದಿರುವ ಮನವಿಗೆ ಸ್ವಂದಿಸಿದ ನ್ಯಾಯಾಲಯವು ಆರೋಪಿಗಳನ್ನು ಕಾರ್ಕಳ ಪೊಲೀಸ್ ಕಸ್ಟಡಿಗೆ ನೀಡಿತು.
ಡಿವೈಎಸ್ಪಿ ವಿಜಯಪ್ರಸಾದ್ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ತು ನೇತೃತ್ವದಲ್ಲಿ ಆರೋಪಿಗಳಿಬ್ಬರನ್ನು ವಿಚಾರಣೆ ಒಳಪಡಿಸಿ ಅಗತ್ಯ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿದ್ದಾರೆ.
ಇತರ ನಕ್ಸಲೀಯರನ್ನು ಶರಣಾಗಿಸುವ ಪ್ರಯತ್ನವನ್ನು ಪೊಲೀಸರು ನಡೆಸಿದ್ದಾರೆ.