ಕಡಬ, ಮೇ 10 (DaijiworldNews/MS): ಮನೆಗಳ್ಳತನದ ಆರೋಪಿಯೋರ್ವನನ್ನು ಕಡಬ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಮರ್ದಾಳ ನಿವಾಸಿ ಹಕೀಂ (23) ಎಂದು ಗುರುತಿಸಲಾಗಿದೆ. ಹಕೀಂ ಗೆ ಕಳ್ಳತನಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿ ಹಮೀದ್(25) ಎಂಬಾತ ಈಗಾಗಲೇ ಬೇರೊಂದು ಪ್ರಕರಣದಲ್ಲಿ ಬೆಂಗಳೂರಿನ ಪೊಲೀಸರ ಬಂಧನದಲ್ಲಿ ಆತನನ್ನು ವಶಕ್ಕೆ ಪಡೆಯಲು ಕಡಬ ಪೊಲೀಸರು ಮುಂದಾಗಿದ್ದಾರೆ
ಆರೋಪಿಗಳು ಮೂರು ತಿಂಗಳ ಹಿಂದೆ ಕಡಬದ ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ಬಾಲಕೃಷ್ಣ ರೈ ಎಂಬವರ ಮನೆಕಳ್ಳತನ ನಡೆಸಿದ್ದರು. ಹಕೀಂ ಮರ್ದಾಳದ ಹೋಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದು ಇಲ್ಲಿಯೇ ಮತ್ತೋರ್ವ ಆರೋಪಿ ಹಮೀದ್ ನ ತಂದೆಯೂ ಕೆಲಸ ಮಾಡುತ್ತಿದ್ದರು. ಇನ್ನು ಬಾಲಕೃಷ್ಣ ರೈ ಕೂಡಾ ಮರ್ಧಾಳದಲ್ಲೇ ಅಂಗಡಿ ಹೊಂದಿದ್ದರು.
ಆಗಾಗ ಹೋಟೇಲ್ಗೆ ಬರುತ್ತಿದ್ದ ಹಮೀದ್ ಹಕೀಂನೊಂದಿಗೆ ಕಳ್ಳತನದ ವ್ಯವಹಾರ ಇಟ್ಟುಕೊಂಡಿದ್ದು ಅಂತೆಯೇ ಬಾಲಕೃಷ್ಣ ರೈ ಅವರ ಮನೆಗೆ ಕನ್ನ ಹಾಕಲು ನಿರ್ಧರಿಸಿ, ಬಾಲಕೃಷ್ಣ ರೈ ಚಲನವಲನಗಳ ಮೇಲೆ ನಿಗಾ ಇಟ್ಟು ಫೆ. 22 ರಂದು ರಾತ್ರಿ ಮನೆಯ ಹಿಂಬಾಗಿಲಿನಿಂದ ನುಗ್ಗಿ, ಮನೆಯಲ್ಲಿದ್ದ 66 ಸಾವಿರ ರೂ. ಕಳ್ಳತನ ನಡೆಸಿದ್ದರು.
ಕಡಬ ಎಸ್ಐ ಆಂಜನೇಯ ರೆಡ್ಡಿ, ಮಾರ್ಗದರ್ಶನದಲ್ಲಿ ತನಿಖಾ ಎಸ್ಐ ಶ್ರೀಕಾಂತ್ ರಾತೋಡ್, ಪೊಲೀಸ್ ಸಿಬ್ಬಂದಿಗಳಾದ ರಮೇಶ್, ಮಹೇಶ್, ಭವಿತ್, ದೀಪಕ್ ಮತ್ತಿತರರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.