ವಿಟ್ಲ, ಮೇ 09 (DaijiworldNews/SM): ಕನ್ಯಾನದ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಘಟನೆ ಖಂಡಿಸಿ, ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಸ್ವಯಂ ಪ್ರೇರಿತ ಬಂದ್ ಆಚರಿಸಿ, ಕನ್ಯಾನ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ಯಾನ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಿ ಬಂದು ಕನ್ಯಾನ ಜಂಕ್ಷನ್ನ ರಸ್ತೆ ಮಧ್ಯೆದಲ್ಲಿ ಕುಳಿತು ಪ್ರತಿಭಟನೆ ನಡೆಸಲಾಯಿತು. ಮೂರು ರಸ್ತೆಗಳಲ್ಲಿ ಸುಮಾರು ೧ ಗಂಟೆಗಳ ಕಾಲ ವಾಹನ ಸಂಚಾರ ನಿಷೇಧಿಸಲಾಗಿತ್ತು. ಕೆಲವು ಅಂಗಡಿ ಮಾಲಕರು ಸ್ವಯಂ ಪ್ರೇರಿತವಾಗಿ ಅಂಗಡಿ ಬಂದ್ ಮಾಡಿ ಬೆಂಬಲ ನೀಡಿದರು. ವಿಟ್ಲ ಪೊಲೀಸ್ ಇನ್ ಸ್ಪೆಕ್ಟರ್ ನಾಗರಾಜ್ ಎಚ್ ಇ ಅವರ ನೇತೃತ್ವದಲ್ಲಿ ಬಿಗೀ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
ಇನ್ನು ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಹಿಂದು ಜಾಗೃತಿಯ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಒಗ್ಗಟ್ಟಾಗಬೇಕು. ಲವ್ ಜಿಹಾದ್ - ಮತಾಂತರಗಳಂತಹ ಚಟುವಟಿಕೆಯನ್ನು ತಡೆಗಟ್ಟುವಲ್ಲಿ ಸರ್ಕಾರಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆ ಎಂದು ತಿಳಿಸಿದರು.
ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ವಿಕೃತ ವಿಷಯಗಳ ಬಗ್ಗೆ ಮುಂಚಿತವಾಗಿಯೇ ಜಾಗೃತರಾಗುವ ಅನಿವಾರ್ಯತೆ ಇದೆ. ವಿಷ ಬೀಜಗಳನ್ನು ನಾಶ ಮಾಡುವ ಕಾರ್ಯವಾಗಬೇಕು. ಸಮಷ್ಟಿ ಶಕ್ತಿಯಿಂದ ಹೋರಾಟಕ್ಕೆ ಹೆಚ್ಚಿನ ಬಲ ಬರುತ್ತದೆ. ನಮ್ಮತನವನ್ನು ಉಳಿಸಿಕೊಳ್ಳುವ ಕಾರ್ಯ ನಡೆಯಬೇಕು ಎಂದರು.