ನವದೆಹಲಿ, ಜ 04(MSP): ಮೂವತ್ತಾರ ಹರೆಯದ ವ್ಯಕ್ತಿಯೋರ್ವ ಗಂಟಲು ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಟೂತ್ ಬ್ರಶ್ ನುಂಗಿದ್ದು, ಅನಂತರ ದೆಹಲಿಯ ಏಮ್ಸ್ನ ವೈದ್ಯರು ಆತನ ಹೊಟ್ಟೆಯಿಂದ ಟೂತ್ಬ್ರಶ್ ಹೊರ ತೆಗೆದ ಕುತೂಹಲಕಾರಿ ಘಟನೆ ನವದೆಹಲಿಯಲ್ಲಿ ನಡೆದಿದೆ.
ದೆಹಲಿಯ ಸೀಮಾಪುರಿಯ ನಿವಾಸಿ ಅವಿದ್ ಎಂಬ ವ್ಯಕ್ತಿ ಡಿಸೆಂಬರ್ 8ರಂದು ತನ್ನ ಗಂಟಲು ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಟೂತ್ಬ್ರಶ್ ನುಂಗಿದ್ದ. ಮರುದಿನ ಆತನಿಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವಿದ್ ನನ್ನು ದೆಹಲಿಯ ಗುರು ತೇಗ್ ಬಹದ್ದೂರ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಇಷ್ಟಾದರೂ ಆತ ತನ್ನ ಆಕಸ್ಮಿಕವಾಗಿ ಟೂತ್ ಬ್ರಶ್ ನುಂಗಿರುವುದು ತನ್ನ ಹೊಟ್ಟೆನೋವಿಗೆ ಕಾರಣ ಎಂದು ವೈದ್ಯಗೆ ತಿಳಿಸಿದೆ ಮರೆಮಾಚಿದ್ದ. ಬಳಿಕ ವೈದ್ಯರು ಸಿ.ಟಿ ಸ್ಕಾನ್ ಮಾಡಿದಾಗ ವಸ್ತುವೊಂದು ದೇಹದಲ್ಲಿರುವುದು ಕಂಡುಬಂದಿದೆ. ಈ ಬಗ್ಗೆ ವೈದ್ಯರು ಅವಿದ್ ನನ್ನು ಪ್ರಶ್ನಿಸಿದಾಗ ಹಲ್ಲುಜ್ಜಿದ ಬ್ರಶ್ ನುಂಗಿರುವುದಾಗಿ ವೈದ್ಯರಿಗೆ ತಿಳಿಸಿದ.
ಬಳಿಕ ಆತನನ್ನು ಎಂಡೋಸ್ಕೋಪಿಗೆ ಏಮ್ಸ್ ಆಸ್ಪತೆಗೆ ಕಳುಹಿಸಲಾಯಿತು. ಡಿಸೆಂಬರ್ 10ರಂದು ಎಂಡೋಸ್ಕೋಪಿ ನಡೆಸಿದ ವೈದ್ಯರು ಅವಿದ್ನ ಹೊಟ್ಟೆಯ ಮೇಲ್ಬಾಗದಲ್ಲಿದ್ದ 12 ಸೆಂಟಿ ಮೀಟರ್ ಉದ್ದ ಬ್ರಶ್ ನ್ನು ಯಶಸ್ವಿಯಾಗಿ ಹೊರ ತೆಗೆದರು.
"ಹಲ್ಲುಜ್ಜುವ ಸಂದರ್ಭ ನಾಲಗೆ ಯನ್ನು ಸ್ವಚ್ಚಗೊಳಿಸುವ ಅಭ್ಯಾಸವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ನಾಲಗೆಯನ್ನು ಸ್ವಚ್ಚಗೊಳಿಸುವಾಗ ಗಂಟಲಿನ ಒಳಭಾಗವನ್ನು ಬ್ರಶ್ ನಿಂದಲೇ ಸ್ವಚ್ಚಗೊಳಿಸಿತ್ತಾರೆ. ಆದರೆ ಇದಕ್ಕಿಂತಲೂ ಟಂಗ್ ಕ್ಲೀನರ್ ರನ್ನು ಬಳಸುವುದು ಉತ್ತಮ" ಎಂದು ಏಮ್ಸ್ನ ಎಮರ್ಜನ್ಸಿ ಮೆಡಿಸ್ಸಿನ್ ನ ಮುಖ್ಯಸ್ಥರಾದ ಡಾ. ಪ್ರವೀಣ್ ಅಗರ್ವಾಲ್ ಎಂದು ಹೇಳಿದ್ದಾರೆ.