ಕಾರ್ಕಳ, ಮೇ 09 (DaijiworldNews/MS): ಕೆಟ್ಟು ನಿಂತ ಬೋರ್ವೆಲ್ ಕೊರೆಯುವ ಯಂತ್ರ ಜೋಡಣೆಗೊಂಡಿರುವ ಲಾರಿಯೊಂದಕ್ಕೆ ಹಿಂಬದಿಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿರುವ ಘಟನೆ ಮಿಯ್ಯಾರುನ ಕುಂಟಿಬೈಲ್ ಎಂಬಲ್ಲಿ ಸಂಭವಿಸಿದೆ.
ಭಾನುವಾರ ಸಂಜೆ ವೇಳೆಗೆ ಸಂಭವಿಸಿದ ಈ ಅಪಘಾತದಲ್ಲಿ ಕಾರು ಚಾಲಕ ಮಾಳದ ನಿವಾಸಿ, ವೃತ್ತಿಯಲ್ಲಿ ಛಾಯಾಗ್ರಾಹಕ ವಿಶ್ವಾಸ್ ಡೋಂಗ್ರೆ ಹಾಗೂ ವೈಶಾಖ್ ಗಾಯಗೊಂಡವರು.ತಮಿಳುನಾಡು ನೊಂದಣೆಯ ಗೋಲ್ಡನ್ ಟೆಂಪಲ್ ಕಂಪೆನಿ ನಾಮಾಂಕಿಯುಳ್ಳ ಬೋರ್ವೆಲ್ ಕೊರೆಯುವ ಯಂತ್ರ ಸಾಗಿಸುತ್ತಿದ್ದ ಲಾರಿಯ ಇಂಜಿನ್ ಕೆಟ್ಟು ಹೋಗಿತ್ತು. ದುರಸ್ಥಿಗಾಗಿ ಲಾರಿಯ ಇಂಜಿನ್ ಕಳಚಿ ದುರಸ್ತಿಗೆ ಕಳುಹಿಸಲಾಗಿತ್ತು. ಅದೇ ಸಂದರ್ಭದಲ್ಲಿ ಲಾರಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿತ್ತು.
ಕೆಟ್ಟು ನಿಂತಿರುವ ಲಾರಿಯ ಹಿಂಬದಿಯಲ್ಲಿ ಯಾವುದೇ ಸೂಚನಾ ಫಲಕ ಅಳವಡಿಸದೇ ಇದುದರಿಂದ ಬಜಗೋಳಿ ಕಡೆಯಿಂದ ಕಾರ್ಕಳ ನಗರದ ಕಡೆಗೆ ಬರುತ್ತಿದ್ದ ಮಾರುತಿ ಆಲ್ಟೋ ಕಾರನ ಚಾಲಕನ ಗಮನಕ್ಕೆ ಬಾರದೇ ಈ ಘಟನೆ ಸಂಭವಿಸಿದೆ. ಕಾರ್ಕಳ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.