ಮಂಗಳೂರು, ಮೇ 09 (DaijiworldNews/HR): ಏಪ್ರಿಲ್ 28 ರಂದು ಎಮ್ಮೆಕೆರೆ ಮೈದಾನದಲ್ಲಿ ನಡೆದ ರೌಡಿ ಶೀಟರ್ ರಾಹುಲ್ ಕಕ್ಕೆ (27) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಎಮ್ಮೆಕೆರೆ ನಿವಾಸಿ ಮಹೇಂದ್ರ ಶೆಟ್ಟಿ (27), ಬೋಳಾರ್ ನಿವಾಸಿ ಅಕ್ಷಯ್ ಕುಮಾರ್ (25), ಎಮ್ಮಕೆರೆ ನಿವಾಸಿ ಸುಶಿತ್ (20), ಮಾರ್ಗನ್ಗೇಟ್ ನಿವಾಸಿ ದಿಲ್ಲೇಶ್ ಬಂಗೇರ (21), ಬೋಳಾರ್ ನಿವಾಸಿ ಶುಭಂ (26), ವಿಷ್ಣು(20) ಎಂದು ಗುರುತಿಸಲಾಗಿದೆ.
ಮಹೇಂದ್ರ ಗಲ್ಫ್ನಲ್ಲಿ ಕೆಲಸ ಮಾಡುತ್ತಿದ್ದು, ಅಕ್ಷಯ್ ಕುಮಾರ್ ಅಬುದಾಬಿಯಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಸುಶಿತ್ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಓದುತ್ತಿದ್ದಾನೆ.
ಇದುವರೆಗಿನ ತನಿಖೆಯಲ್ಲಿ ಪ್ರಕರಣದಲ್ಲಿ ಒಟ್ಟು 13 ಮಂದಿ ಭಾಗಿಯಾಗಿರುವುದಾಗಿ ತಿಳಿದು ಬಂದಿದ್ದು, ಆ ಪೈಕಿ 8 ಮಂದಿ ಅಪರಾಧ ಹಿನ್ನಲೆಯುಳ್ಳವರಾಗಿದ್ದರೆ. ಬಂಧಿತ ಸುಶೀತ್ ಮೇಲೆ ಒಂದು ಕೊಲೆ ಯತ್ನ ಪ್ರಕರಣ , ಅಕ್ಷಯ್ ಕುಮಾರ್ ಮೇಲೆ ಹಲ್ಲೆ ಪ್ರಕರಣ ಈಗಾಗಲೇ ದಾಖಲಾಗಿತ್ತು.
ರಾಹುಲ್ ಮತ್ತು ಪ್ರಮುಖ ಆರೋಪಿ ಮಹೇಂದ್ರ 2016ರಲಿ ಎಮ್ಮೆಕೆರೆ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ಜಗಳ ನಡೆದಿದ್ದು, 2019ರಲ್ಲಿ ಮಹೇಂದ್ರ ಶೆಟ್ಟಿ ಮೇಲೆ ರಾಹುಲ್ ಮತ್ತು 2020 ರಲ್ಲಿ ರಾಹುಲ್ ಮಹೇಂದ್ರ ಶೆಟ್ಟಿ ಮತ್ತು ಕಾರ್ತಿಕ್ ಶೆಟ್ಟಿ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು.
ಈ ದ್ವೇಷದಿಂದಾಗಿ ಕಾರ್ತಿಕ್ ಶೆಟ್ಟಿ ಮತ್ತು ಮಹೇಂದ್ರ ಶೆಟ್ಟಿ ಆತನ ಸ್ನೇಹಿತರೊಂದಿಗೆ ರಾಹುಲ್ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿದ್ದರು.
ಬಂಧಿತರಿಂದ 10 ಹರಿತವಾದ ಆಯುಧಗಳು, 2 ದ್ವಿಚಕ್ರ ವಾಹನ, 5 ಮೊಬೈಲ್ ಸೆಟ್ ವಶಪಡಿಸಿಕೊಳ್ಳಲಾಗಿದೆ.