ಮಲ್ಪೆ, ಮೇ 09 (DaijiworldNews/MS): ಆಜಾನ್ ಶಬ್ದ ನಿಯಂತ್ರಣಕ್ಕಾಗಿ ಮೈಕ್ಗಳಿಗೆ ಅಳವಡಿಸಲು ಡಿವೈಸ್ ಅಭಿವೃದ್ಧಿಪಡಿಸಲಾಗಿದ್ದು, ಹೀಗಾಗಿ ಶಬ್ದವನ್ನು ನಿಯಂತ್ರಣದಲ್ಲಿ ಇಡಹುದಾಗಿದೆ ಎಂದು ಬೆಂಗಳೂರು ಸಿಟಿ ಜಾಮಿಯಾ ಮಸೀದಿಯ ಖತೀಬ್ ಮೌಲಾನ ಡಾ| ಮೊಹಮ್ಮದ್ ಮಕ್ಸೂದ್ ಇಮ್ರಾನ್ ಸಹಾಬ್ ರಶಾದಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಶಬ್ದ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಯಾರಿಗೂ ತೊಂದರೆ ನೀಡುವುದು ಸರಿಯಲ್ಲ ಬೇಕೆಂದರೆ ದೇವಸ್ಥಾನ, ಚರ್ಚ್, ಗುರುದ್ವಾರಗಳಲ್ಲೂ ಅಳವಡಿಸಿಕೊಳ್ಳಬಹುದಾಗಿದೆ. ಈ ಡಿವೈಸ್ ಆದಷ್ಟು ಬೇಗ ರಾಜ್ಯದ ಎಲ್ಲ ಮಸೀದಿಗಳಲ್ಲೂ ಅಳವಡಿಕೆ ಮಾಡಲಾಗುವುದು ಹಾಗೂ ಪ್ರತಿಯೊಂದು ಜಿಲ್ಲೆಗೂ ತೆರಳಿ ಈ ಬಗ್ಗೆ ಅರಿವು ಮೂಡಿಸಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಆಜಾನ್ಗೆ ಸಂಬಂಧಿಸಿ ಶ್ರೀರಾಮ ಸೇನೆಯವರು ಮಸೀದಿಯ ಮುಂದೆ ಹನುಮಾನ್ ಚಾಲೀಸಾ ಪಠಿಸಿದರೆ ಯಾರೂ ವಿರೋಧ ಮಾಡಬಾರದು. ಅವರಿಗೆ ನೀರು ಬೇಕಾದರೆ ನೀರು, ಜ್ಯೂಸ್ ಬೇಕಾದರೆ ಜ್ಯೂಸ್ ಕೊಡಿ. ಆ ಮೂಲಕ ನಾವು ಸೌಹಾರ್ದದ ಸಂದೇಶವನ್ನು ನೀಡಬೇಕು ಎಂದರು. ಈ ಸಂದರ್ಭ ಉಡುಪಿ ಜಿಲ್ಲಾ ವಕ್ಫ್ ಮಂಡಳಿ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಯಾಹ್ಯ ನಕ್ವಾ ಹಾಜರಿದ್ದರು.