ಬೆಳ್ತಂಗಡಿ, ಮೇ 08 (DaijiworldNews/DB): ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮೇಲೆ ಅಪಪ್ರಚಾರ ಮಾಡಿದ ಆರೋಪದಲ್ಲಿ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಅವರಿಗೆ ಬೆಳ್ತಂಗಡಿ ಸಿವಿಲ್ ಕೋರ್ಟ್ ವಿಧಿಸಿದ್ದ ಜೈಲು ಶಿಕ್ಷೆಯನ್ನು ಕರ್ನಾಟಕ ಹೈ ಕೋರ್ಟ್ ಎತ್ತಿ ಹಿಡಿದಿದೆ.
ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ದ ಅಪಪ್ರಚಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಸಿವಿಲ್ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ಆಸ್ತಿ ಮುಟ್ಟುಗೋಲು ಹಾಗೂ ದಂಡ ವಿಧಿಸಿತ್ತು. ಇದರ ವಿರುದ್ದ ಸೋಮನಾಥ್ ನಾಯಕ್ ಅವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ಹೈ ಕೋರ್ಟ್, ಮೇ 5 ರಂದು ಸೋಮನಾಥ ನಾಯಕ್ ಅವರ ರಿಟ್ ಅರ್ಜಿಯನ್ನು ವಜಾಗೊಳಿಸಿ, ಬೆಳ್ತಂಗಡಿ ಸಿವಿಲ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ತೀರ್ಪು ನೀಡಿದೆ.
ಸೋಮನಾಥ ನಾಯಕ್ ಹೆಗ್ಗಡೆಯವರ ಕುರಿತು ಮಿಥ್ಯಾರೋಪ ಮಾಡಿರುವುದು ಸಾಬೀತಾಗಿದೆ. ಮಿತಿಗಿಂತ ಹೆಚ್ಚು ಸ್ಥಿರಾಸ್ತಿ ಹೊಂದಿದ್ದಾರೆಂಬುದಾಗಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಅಲ್ಲದೆ, ಹೆಗ್ಗಡೆ ಮತ್ತವರ ಕುಟುಂಬ ತಮ್ಮ ಹಲವು ಆಸ್ತಿಗಳನ್ನು ಸಾಗುವಳಿದಾರರಿಗೆ ಬಿಟ್ಟುಕೊಟ್ಟಿರುವುದು ದಾಖಲೆಗಳ ಮೂಲಕ ಕಂಡು ಬಂದಿದೆ. ಕ್ಷೇತ್ರ ಮತ್ತು ಹೆಗ್ಗಡೆಯವರಿಗೆ ದಕ್ಕೆ ತರುವ ಸುಳ್ಳು ಆರೋಪಗಳು ಕ್ಷಮೆಗೆ ಅರ್ಹವಲ್ಲ ಸೇರಿದಂತೆ ಹಲವು ಅಂಶಗಳನ್ನು ಕೋರ್ಟ್ ತನ್ನ 148 ಪುಟಗಳ ತೀರ್ಪಿನಲ್ಲಿ ತಿಳಿಸಿದೆ.
ಕ್ಷೇತ್ರದ ಪರವಾಗಿ ನ್ಯಾಯವಾದಿಗಳಾದ ಕೆ. ಚಂದ್ರನಾಥ ಆರಿಗ ಬೆಂಗಳೂರು ಮತ್ತು ರತ್ನವರ್ಮ ಬುಣ್ಣು ಬೆಳ್ತಂಗಡಿ ಅವರು ವಾದಿಸಿದ್ದರು.