ಮಂಗಳೂರು, ಮೇ 08 (DaijiworldNews/DB): ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಡಗೇರಿ ಗ್ರಾಮದ ಸುಕ್ರಿ ಬೊಮ್ಮಗೌಡ (86) ಕಳೆದ ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಕುಟುಂಬದವರು ಪರಿಸರವಾದಿ ದಿನೇಶ್ ಹೊಳ್ಳ ಅವರನ್ನು ಸಂಪರ್ಕಿಸಿದಾಗ ದಿನೇಶ್ ಹೊಳ್ಳ ಅವರ ಸಲಹೆ ಮೇರೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸುಕ್ರಿ ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು, ವೈದ್ಯರ ತಂಡ ನಿಗಾ ಇಟ್ಟಿದೆ.
ಹಾಲಕ್ಕಿ ಸಮಾಜದ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾಗಿರುವ ಸುಕ್ರಿ ಬೊಮ್ಮಗೌಡ ಬುಡಕಟ್ಟು ಸಮುದಾಯವಾದ ಹಾಲಕ್ಕಿ ಒಕ್ಕಲಿಗ ಪಂಗಡವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ.