ಮಂಗಳೂರು, ಮೇ 08 (DaijiworldNews/HR): ಗ್ರಾಮ ಲೆಕ್ಕಾಧಿಕಾರಿ (ವಿಎ) ಹುದ್ದೆ ಕೊಡಿಸುವುದಾಗಿ ನಂಬಿಸಿ ನಾಲ್ವರು ಸೇರಿ 40 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನ ನಾಗಭೂಷಣ್, ವಾಮಂಜೂರಿನ ನಾರಾಯಣಸ್ವಾಮಿ, ಮುಲ್ಕಿಯ ಮಹೇಶ್ ಭಟ್ ಮತ್ತು ಮೂಡುಬಿದಿರೆಯ ದಿನೇಶ್ ವಿರುದ್ಧ ಹಾಸನದ ಆಲೂರು ನಿವಾಸಿ ಕೃಷ್ಣೇಗೌಡ (66) ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರುದಾರ ಕೃಷ್ಣೇಗೌಡರ ಪುತ್ರ ದರ್ಶನ್ ಸಿಕೆ ಬೆಂಗಳೂರಿನ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಅವಧಿಯಲ್ಲಿ ಹಾಸನದ ಹೇಮಾವತಿ, ಚಿಕ್ಕಮಗಳೂರಿನ ಲೋಹಿತ್ ಮತ್ತು ಬೆಂಗಳೂರಿನ ಮಹಮ್ಮದ್ ಷರೀಫ್ ಅವರೊಂದಿಗೆ ಪರಿಚಯವಾಗಿದ್ದರು. 2019ರಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಮಹಮ್ಮದ್ ಷರೀಫ್ ತಮ್ಮ ನೆರೆಹೊರೆಗೆ ಪೂಜೆಗೆಂದು ಬರುತ್ತಿದ್ದ ಮುಲ್ಕಿಯ ಮಹೇಶ್ ಭಟ್ ಅವರಿಗೆ ವಿಷಯ ತಿಳಿಸಿದ್ದಾರೆ.
ಸಿಬಿಐನಲ್ಲಿ ಅಧಿಕಾರಿಯಾಗಿರುವ ನಾರಾಯಣ ಸ್ವಾಮಿ ಅವರ ಪರಿಚಯವಿದೆ ಎಂದು ಮಹೇಶ್ ಭಟ್ ಹೇಳಿದ್ದರು, ಅವರು ರಾಜಕಾರಣಿಗಳು ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಅವರು ಕೆಲಸ ಮಾಡಬಹುದು ಎಂದು ಭರವಸೆ ನೀಡಿದರು.
ಇನ್ನು ಮಹಮ್ಮದ್ ಷರೀಫ್ ಮತ್ತು ಇತರ ಮೂವರು ಮಹೇಶ್ ಭಟ್ ಅವರನ್ನು ನಂಬಿ ಆಗಸ್ಟ್ 2019 ರಲ್ಲಿ ಅವರ ಮನೆಗೆ ಹೋಗಿ ನಾರಾಯಣಸ್ವಾಮಿಯನ್ನು ಭೇಟಿಯಾದರು. ಬೆಂಗಳೂರಿನಲ್ಲಿ ನಾಗಭೂಷಣ್ ಹಾಗೂ ಮೂಡುಬಿದಿರೆಯ ದಿನೇಶ್ ಅವರೊಂದಿಗೆ ಮಾತನಾಡಿ ಅಭ್ಯರ್ಥಿಯ ಕಡೆಯವರು ಬೇಡಿಕೆ ಇಟ್ಟಿರುವಷ್ಟು ಹಣ ಕೊಡಲು ಸಾಧ್ಯವಾದರೆ ವಿಎ ಹುದ್ದೆ ಕೊಡಿಸುವುದಾಗಿ ನಾರಾಯಣಸ್ವಾಮಿ ತಿಳಿಸಿದರು.
ಕೃಷ್ಣೇಗೌಡ ಅವರು ವಾಮಂಜೂರಿನ ನಿವಾಸದಲ್ಲಿ ನಾರಾಯಣಸ್ವಾಮಿ ಅವರಿಗೆ 8 ಲಕ್ಷ ರೂ. ನೀಡಿದ್ದು, ಕೃಷ್ಣೇಗೌಡ ನೇಮಕಾತಿ ಆದೇಶ ಕೇಳಿದಾಗ ಕಾರಣಾಂತರಗಳಿಂದ ವಿಳಂಬವಾಗುತ್ತಿದೆ ಎನ್ನುತ್ತಿದ್ದರು. 2021ರ ಸೆಪ್ಟೆಂಬರ್ನಲ್ಲಿ, ನೇಮಕಾತಿ ಆದೇಶವನ್ನು ಪಡೆಯಲು ಬೆಂಗಳೂರಿಗೆ ಬರುವಂತೆ ಆರೋಪಿಗಳು ಕೃಷ್ಣೇಗೌಡರಿಗೆ ಹೇಳಿ ನಕಲಿ ಪತ್ರವನ್ನು ನೀಡಿದ್ದರು. ಕೃಷ್ಣ ಗೌಡ ಮತ್ತು ಅವರ ಪುತ್ರ ದರ್ಶನ್ ತಮಗೆ ತೋರಿದ ನಕಲಿ ಆದೇಶ ನಿಜವೆಂದು ನಂಬಿ ಉಳಿದ 32 ಲಕ್ಷ ರೂಪಾಯಿಯನ್ನು ಅಕ್ಟೋಬರ್ 24, 2021 ರಂದು ನಾರಾಯಣಸ್ವಾಮಿಗೆ ನೀಡಿದರು.
ನಂತರ ದರ್ಶನ್ ನೇಮಕಾತಿ ಕುರಿತು ಕೇಳಿದಾಗ ಆರೋಪಿಗಳು ಕುಂಟು ನೆಪ ಹೇಳಲು ಆರಂಭಿಸಿದ್ದು, ಕೃಷ್ಣೇಗೌಡ ಅವರು ದೂರವಾಣಿಯಲ್ಲಿ ಅಸಭ್ಯವಾಗಿ ಮಾತನಾಡಿದಾಗ ಆರೋಪಿಗಳು ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ ಎಂದು ಪೊಲೀಸರಿಗೆ ದೂರು ನೀಡಿದರೆ ಪೆಟ್ರೋಲ್ ಸುರಿದು ಸಜೀವವಾಗಿ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಕೃಷ್ಣೇಗೌಡ ಪೊಲೀಸರಿಗೆ ದೂರು ನೀಡಿದ್ದಾರೆ.