ಪುತ್ತೂರು, ಮೇ 08 (DaijiworldNews/DB): ಸಾಮಾನ್ಯವಾಗಿ ಕ್ಯಾಂಟೀನ್ ಎಂದರೆ ಅಲ್ಲಿ ಚಹಾ, ಕಾಫಿ, ಬಗೆಬಗೆಯ ಸ್ನ್ಯಾಕ್ಸ್ಗಳು ಗ್ರಾಹಕರಿಗಾಗಿ ಕಾದಿರುತ್ತವೆ. ಆದರೆ ಕೇವಲ ಗಿಡಮೂಲಿಕೆಗಳಿಂದಲೇ ಮಾಡಲ್ಪಟ್ಟ ಚಹಾಗಳನ್ನು ಗ್ರಾಹಕರಿಗೆ ಪೂರೈಸುವ ಹಸಿರು ಕ್ಯಾಂಟೀನೊಂದು ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಮನ ಸೆಳೆಯುತ್ತಿದೆ.
ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಪುತ್ತೂರು ತಾಲೂಕಿನ ಪರ್ಪುಂಜ ಎಂಬಲ್ಲಿ ಈ ನಿಸರ್ಗದತ್ತವಾದ ಸೌಗಂಧಿಕಾ ಚಹಾದಂಗಡಿ ಸಿಗುತ್ತದೆ. ಇಲ್ಲಿ ಬಿದಿರಿನ ಚಹಾ, ಮಸಾಲಾ ಚಹಾ, ಗಾಂಧಾರಿ ಲೈಮ್ ಸೋಡಾ, ಇಲಾಯಿಚಿ ಚಹಾ, ನಿಂಬೆ ಎಲೆ ಚಹಾ, ವೀಳ್ಯ ಚಹ, ಕಾಮಕಸ್ತೂರಿ ಚಹಾ, ತುಳಸಿ ಚಹಾ ಸಿಗುತ್ತದೆ. ಈ ಕ್ಯಾಂಟೀನ್ನಲ್ಲಿ ಕುಳಿತುಕೊಳ್ಳಲು ಯಾವುದೇ ಆಧುನಿಕ ವ್ಯವಸ್ಥೆಗಳಾಗಲೀ ಇಲ್ಲ. ಆದರೆ ಒಮ್ಮೆ ಭೇಟಿ ನೀಡಿದರೆ ಮತ್ತೊಮ್ಮೆ ಹೋಗುವುದು ಖಚಿತ ಎಂಬಂತಿದೆ ಇಲ್ಲಿ ಸಿಗುವ ಚಹಾ ಸೇವನೆಯ ಅನುಭೂತಿ ಮತ್ತು ಸೇವೆ.
ಚಂದ್ರಹಾಸ್ ಮತ್ತು ಪ್ರೀತಿ ದಂಪತಿ ಕಳೆದ ಹತ್ತು ವರ್ಷಗಳಿಂದ ಸಣ್ಣ ನರ್ಸರಿ ಮತ್ತು ಈ ಕ್ಯಾಂಟೀನ್ನ್ನು ಇಲ್ಲಿ ನಡೆಸುತ್ತಿದ್ದಾರೆ. ವಿವಿಧ ಜಾತಿಯ ಹೂವು ಮತ್ತು ಔಷಧೀಯ ಸಸ್ಯಗಳನ್ನು ಬಳಸಿಯೇ ಚಹಾವನ್ನು ಇಲ್ಲಿ ತಯಾರಿಸಲಾಗುತ್ತದೆ.
ರುಚಿಯೊಂದಿಗೆ ಆರೋಗ್ಯಕ್ಕೂ ಈ ಚಹಾಗಳು ಉತ್ತಮವಾಗಿವೆ. ಹಿಂದಿನ ಕಾಲದಲ್ಲಿಕಫ, ಶೀತ, ತಲೆನೋವು ಮುಂತಾದವುಗಳಿಗೆ ಹಿರಿಯರು ವಿವಿಧ ಗಿಡಮೂಲಿಕೆಗಳ ಕಷಾಯ ನೀಡುತ್ತಿದ್ದರು. ಅದೇ ಗಿಡಮೂಲಿಕೆಗಳಿಂದ ಚಹಾ ತಯಾರಿಸಿ ಈ ದಂಪತಿ ಗ್ರಾಹಕರಿಗೆ ಒದಗಿಸುತ್ತಿದ್ದಾರೆ. ತಮ್ಮ ನರ್ಸರಿಯಲ್ಲಿ ಬೆಳೆದ ಗಿಡಮೂಲಿಕೆ, ನಿಂಬೆಗಳನ್ನೇ ಚಹಾಕ್ಕೆ ಬಳಸುತ್ತಿದ್ದಾರೆ. ಚಹಾ ಮಾತ್ರವಲ್ಲದೆ, ನಿಂಬೆ ಹಣ್ಣಿನ ಪಾನಕ, ಪಪ್ಪಾಯ ಪಾನಕ, ಫ್ಯಾಶನ್ ಹಣ್ಣು, ಫೈನಾಪಲ್ ಹಣ್ಣುಗಳ ಜ್ಯೂಸ್ ಕೂಡಾ ಇಲ್ಲಿ ಲಭ್ಯವಿದೆ. ಇವೆಲ್ಲವೂ ನರ್ಸರಿಯಲ್ಲಿ ಬೆಳೆದವುಗಳಾಗಿವೆ. ಹಸಿರು ಪರಿಸರ ಮತ್ತು ಗಿಡಮೂಲಿಕೆಗಳ ಚಹಾ ಸೇವಿಸಲು ಇಲ್ಲಿ ನಿತ್ಯ ಗ್ರಾಹಕರು ತುಂಬಿ ತುಳುಕುತ್ತಾರೆ.