ಬಂಟ್ವಾಳ, ಮೇ 07 (DaijiworldNews/HR): ಕರ್ನಾಟಕದಲ್ಲಿ ಮಕ್ಕಳಿಗೆ ಕನ್ನಡದ ಜೊತೆಗೆ ಎಲ್ಲಾ ಭಾಷೆಗಳನ್ನು ಕಲಿಸಬೇಕಿದೆ, ಇದಕ್ಕಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಮಾರ್ಪಾಡು ತರಬೇಕಾದ ಅನಿವಾರ್ಯತೆಯೂ ಇದೆ ಎಂದು ಉಡುಪಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶನಿವಾರ ಸಂಜೆ ಶ್ರಿ ದುರ್ಗಾ ಚಾರಿಟೇಬಲ್ ಟ್ರಸ್ಟ್ ದಡ್ಡಲಕಾಡು ಹಾಗೂ ಸರಕಾರಿ ಆಂಗ್ಲಮಾಧ್ಯಮ ಪ್ರೌಢ ಶಾಲೆ ದಡ್ಡಲಕಾಡು ಇವರ ಸಹಯೋಗದಲ್ಲಿ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಪ್ರೌಢ ಶಾಲೆಯಲ್ಲಿ ಎರಡುದಿನಗಳ "ದಡ್ಡಲಕಾಡು ಸಂಭ್ರಮೊತ್ಸವ" ನೂತನವಾಗಿ ನಿರ್ಮಾಣಗೊಂಡ 13 ಕೊಠಡಿಗಳು, ಕಲಿಕಾ ಭವನ,ಕಂಪ್ಯೂಟರ್ ತರಗತಿ, ಪ್ರಯೋಗಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ರಾಜಕೀಯ ಕಾರಣಕ್ಕೆ, ಹೋರಾಟದ ಕಾರಣಕ್ಕೆ ಮಕ್ಕಳಿಗೆ ಭಾಷೆಯ ಕಲಿಕೆಗೆ ಮಿತಿಯನ್ನು ಹೇರುವುದು ಸರಿಯಲ್ಲ ಎಂದ ಅವರು, ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದರ ಜೊತೆಗೆ ಇಂಗ್ಲೀಷ್, ಹಿಂದಿ ಕೂಡ ಮಕ್ಕಳ ಶಿಕ್ಷಣದ ಭಾಗವಾಗಲಿ ಎಂದರು.
ಕೇಂದ್ರೀಯ ಶಿಕ್ಷಣದ ಪಠ್ಯಕ್ರಮದ ಅನುಷ್ಠಾನದಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೂ ಆದ್ಯತೆ ಸಿಗಬೇಕು ಎಂದವರು ಒತ್ತಾಯಿಸಿದ ಅವರು, ಸರಕಾರಿ ಶಾಲೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸರಕಾರ ಕೋಟ್ಯಾಂತರ ರೂಪಾಯಿ ಅನುದಾನ ವ್ಯಯಿಸುತ್ತಿದೆ.ಆದರೆ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆಯೇ ಎಂಬುದನ್ನು ಆತ್ಮವಲೋಕನ ಮಾಡಬೇಕಾಗಿದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರ ಮಾನಸಿಕತೆ ಬದಲಾಗಬೇಕಾಗಿದೆ ಎಂದಿದ್ದಾರೆ.
ದಡ್ಡಲುಕಾಡು ಶಾಲೆ ಇಡೀ ದೇಶದ ಗಮನಸೆಳೆದಿದ್ದು,ಫಲಿತಾಂಶದಲ್ಲು ಶಿಕ್ಷಕರು ವಿಶೇಷ ಪ್ರಯತ್ನ ಪಡಬೇಕಾಗಿದೆ.ಶಿಕ್ಷಣದ ಜೊತೆಗೆ ದೇಶಭಕ್ತಿಯು ಅತೀ ಅಗತ್ಯವಾಗಿದ್ದು, ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಎತ್ತರಕ್ಕೆರಲಿ ಎಂದು ಹಾರೈಸಿದರು.