ಉಡುಪಿ, ಮೇ 07 (DaijiworldNews/DB): ರಾಜ್ಯದ ಜನರ ಆಶೀರ್ವಾದ ಮತ್ತು ದೇವರ ದಯೆ ಇದ್ದಲ್ಲಿ ಖಂಡಿತವಾಗಿಯೂ ನಾನು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಬ್ರಹ್ಮಾವರದ ನೀಲಾವರದಲ್ಲಿ ಶನಿವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಟ್ಟಿಲ್ಲ. ಈಗಾಗಲೇ ಒಂಬತ್ತು ಬಾರಿ ಚುನಾವಣೆಗೆ ನಿಂತು ಗೆಲುವು ಸಾಧಿಸಿದ್ದೇನೆ. ಸದ್ಯ ನನಗೆ 61 ವರ್ಷ ವಯಸ್ಸು. ಆದರೆ ವಯಸ್ಸು 75 ಆದಾಗಲೂ ಯುವಕನಂತೆಯೇ ಹುರುಪಿನಿಂದ ಇರುತ್ತೇನೆ. ಮುಖ್ಯಮಂತ್ರಿ ಸ್ಥಾನ ನಾನು ಕೇಳುವುದಿಲ್ಲ. ದೇವರ ದಯೆ ಮತ್ತು ಜನಾಶೀರ್ವಾದದಿಂದ ಅದು ಒಲಿದು ಬಂದರೆ ಮುಂದೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದರು.
ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗುವುದಕ್ಕೆ ನಾನೆಂದು ಬಿಡುವುದಿಲ್ಲ. ಅನ್ಯಾಯವಾದರೆ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟು ಮತ್ತೆ ಹೋರಾಡುತ್ತೇನೆ. ಈ ಹಿಂದೆಯೂ ಅದನ್ನೇ ಮಾಡಿದ್ದೇನೆ ಎಂದವರು ತಿಳಿಸಿದರು.
ಸಿದ್ದರಾಮಯ್ಯ ಸರ್ಕಾರವಿದ್ದ ವೇಳೆ ಆಕಳು, ಹೋರಿ ಮೃತಪಟ್ಟರೆ ಪರಿಹಾರ ನೀಡಲಾಗುತ್ತಿತ್ತು. ಆದರೆ ಎಮ್ಮೆ, ಕೋಣಗಳ ಸಾವಿಗೆ ಯಾವುದೇ ಪರಿಹಾರ ನೀಡದೇ ಇದ್ದಿದ್ದರಿಂದ ಇವುಗಳನ್ನು ಸಾಕುತ್ತಿದ್ದವರಿಗೆ ಅನ್ಯಾಯ ಆಗುತ್ತಿತ್ತು. ಹೀಗಾಗಿ ಪ್ರತ್ಯೇಕ ರಾಜ್ಯ ಬೇಡಿಕೆ ಇಟ್ಟು ಹೋರಾಟದ ಹಾದಿ ತುಳಿದಿದ್ದೆ. ಪ್ರಸ್ತುತ ಇಂತಹ ತಾರತಮ್ಯ ನಿವಾರಣೆಯಾಗಿದೆ ಎಂದು ಉಮೇಶ್ ಕತ್ತಿ ತಿಳಿಸಿದರು.
ಮೈಸೂರು ಭಾಗದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಯಾವ ಆಪರೇಷನ್ ಕಮಲನೂ ಇಲ್ಲ. ಪಕ್ಷದ ಸಿದ್ದಾಂತಗಳನ್ನು ನಂಬಿ ಬರುವವರೆಗೆ ಸ್ವಾಗತ. ಬಾರದವರು ಎಲ್ಲಿ ಇರುತ್ತಾರೋ ಅಲ್ಲೆ ಇರುತ್ತಾರೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆ ನಡೆಯುತ್ತಿದೆ. ಸರಿಯಾದ ಮಾಹಿತಿ ಬಂದಾಗ ತಿಳಿಸುತ್ತೇವೆ ಎಂದರು.
ಸಿಎಂ ಸ್ಥಾನಕ್ಕೆ 2,500 ಕೋಟಿ ರೂ.ಗಳಿಗೆ ಬೇಡಿಕೆ ಬಂದಿತ್ತು ಎಂಬ ಯತ್ನಾಳ್ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ್ ತಿಳಿದೋ, ತಿಳಿಯದೆಯೋ ಹೇಳಿದ್ದಾರೆ ಎಂದರು.
ಕಾಂಗ್ರೆಸ್ ನ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದಲ್ಲಿದ್ದುಕೊಂಡು ಮಾಡುವುದಕ್ಕೆ ಬೇರೆ ಕೆಲಸ ಇಲ್ಲ. ಅವರಿಗೆ ಮುಂದಿನ ದಿನಗಳಲ್ಲಿ ಜನರೇ ಉತ್ತರ ಕೊಡುತ್ತಾರೆ. ಪ್ರಿಯಾಂಕ ಖರ್ಗೆ ರಾಜಕೀಯದ ವರ್ತನೆಯಲ್ಲಿ ಎಕ್ಸ್ ಪರ್ಟ್ಸ್. ಕಾನೂನಿನ ಚೌಕಟ್ಟಿನಲ್ಲಿ ಕರೆದಾಗ ಹಾಜರಾಗುವುದು ನಮ್ಮ ಧರ್ಮ. ಒಬ್ಬ ಜನಪ್ರತಿನಿಧಿಯಾದವನು ಇದನ್ನು ತಿಳಿದುಕೊಂಡಿರಬೇಕು ಮತ್ತು ಮಾತನಾಡುವ ಮೊದಲು ಯೋಚಿಸಬೇಕು ಎಂದು ಉಮೇಶ್ ಕತ್ತಿ ತಿಳಿಸಿದರು.