ಉಡುಪಿ, ಮೇ 07 (DaijiworldNews/HR): ಹಲವು ಕಾಂಗ್ರೆಸ್ ಮುಖಂಡರು ನನ್ನ ಸಂಪರ್ಕದಲ್ಲಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಸೇರಲಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಂಜೆ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಪಕ್ಷ. ಕಾಲಕಾಲಕ್ಕೆ ಬೇರೆ ರಾಜಕೀಯ ಪಕ್ಷಗಳ ಜನ ನಮ್ಮ ಪಕ್ಷ ಸೇರುತ್ತಾರೆ. ಪ್ರಧಾನಮಂತ್ರಿ (ಪಿಎಂ) ನರೇಂದ್ರ ಮೋದಿ ಅವರನ್ನು ವಿದೇಶಗಳಲ್ಲಿ ಬಹಳ ಗೌರವಿಸಲಾಗುತ್ತದೆ. ಪ್ರಧಾನಿ ಮೋದಿಯವರ ಆಡಳಿತವು ಅಭಿವೃದ್ಧಿ ಮತ್ತು ಪ್ರಾಮಾಣಿಕತೆ ಮತ್ತು ಹಗರಣ ಮುಕ್ತವಾಗಿದೆ ಎಂದರು.
ಇನ್ನು ಕರ್ನಾಟಕದಲ್ಲಿ ಒಂದು ರೀತಿಯ ಕುರುಕ್ಷೇತ್ರ ನಡೆಯುತ್ತಿದೆ. ನಮ್ಮ ವಿಚಾರ, ಸಂಸ್ಕ್ರತಿಗೆ ವಿರೋಧಿಯಾಗಿರುವ ಒಂದು ಗುಂಪು ಮತ್ತು ಭಾರತೀಯ ಸಂಸ್ಕ್ರತಿ, ವಿಚಾರಧಾರೆಯನ್ನು ಒಪ್ಪುವ ಒಂದು ಗುಂಪು ಹೀಗೆ ಎರಡು ಗುಂಪುಗಳ ರಾಜ್ಯದಲ್ಲಿ ಇವೆ ಎಂದರು.
ಈ ಕುರುಕ್ಷೆತ್ರ ಯುದ್ದವನ್ನು ಗೆಲ್ಲಿಸಿಕೊಳ್ಳಬೇಕಾಗಿ ಬೇಕಾಗಿರುವ ತಳಹದಿ ಮತ್ತು ಯೋಜನೆಯನ್ನ ನಾವು ಮಾಡಬೇಕಾಗಿದೆ. 224 ಕ್ಷೇತ್ರಗಳಲ್ಲಿ ಯಾವುದೇ ಸಂಧರ್ಭದಲ್ಲಿ ಕೂಡಾ ನಮಗೆ ಬಹುಮತ ಬಂದಿಲ್ಲ. 2008 ರಲ್ಲಿ 110 ಸೀಟ್ ಗೆದ್ದಿದ್ದೆವು, ಕಳೆದ ಬಾರಿಯ ಚುನಾವಣೆಯಲ್ಲಿ 104 ಸೀಟ್ ಗೆದ್ದಿದ್ದೆವು. ಬೇರೆ ಬೇರೆ ಪಕ್ಷಗಳ ಸಮಾನ ಮನಸ್ಕರು ಸೇರಿ ಹೊಸ ಸರಕಾರವನ್ನು ನಾವು ರಚನೆ ಮಾಡಿದ್ದೆವು. ಸ್ವಾತಂತ್ಯನಂತರ ಮಂಡ್ಯದಲ್ಲಿ ನಾವು ಒಂದೇ ಒಂದು ಸೀಟ್ ಗೆದ್ದಿರಲಿಲ್ಲ, ಮೊದಲಬಾರಿಗೆ ಅಲ್ಲಿ ನಾರಾಯಣಗೌಡರು ಗೆದ್ದು ಮಂತ್ರಿಯಾಗಿದ್ದಾರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹಳ ದೊಡ್ಡ ಬಹುಮತದೊಂದಿಗೆ ಗೆದ್ದು ಸ್ವಂತ ಶಕ್ತಿಯಲ್ಲಿ ಸರಕಾರ ರಚನೆ ಮಾಡಬೇಕು. ಮುಂದಿನ ಮೂರು ನಾಲ್ಕು ತಿಂಗಳು ನಾವು ಯಥಾವತ್ತಾಗಿ ಕೆಲಸ ಮಾಡಿದರೆ ಮುಂದಿನ ಚುನಾವಣೆಯಲ್ಲಿ ನಾವು ಖಂಡಿತ ಗೆಲ್ಲುತ್ತೇವೆ ಎಂದರು.
ಇನ್ನು ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಹಿರಿಯ ನಾಗರಿಕರಿಗೆ ಅಸಮಧಾನ ಇದೆ. ಇದರಿಂದಾಗಿ ಹಲವಾರು ಜನ ಕಾರ್ಯಕರ್ತರು ಬಿಜೆಪಿಗೆ ಬರಲು ಯೋಚನೆ ಮಾಡುತಿದ್ದಾರೆ. ಒಂದು ಸಲ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಅದ ಅನಾಹುತಗಳ ಬಗ್ಗೆ ನಾವು ಕಲ್ಪಿಸಿಕೊಳ್ಳಬೇಕು. ಈಗ ಚುನಾವಣೆ ಗೆಲ್ಲುವುದಕ್ಕೂ ಮುನ್ನವೇ ಭ್ರಮೆಯಲ್ಲಿಯೇ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಘೋಷಣೆ ಮಾಡಿದ್ದಾರೆ. ಕೇವಲ ಅಲ್ಪಸಂಖ್ಯಾತ ಮತದ ಓಲೈಕೆಯಿಂದ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಇದೇ ಭ್ರಮೆಯಲ್ಲಿ ದೇಶದಲ್ಲಿ ಅವರು ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ ಆ ಭ್ರಮೆ ಇನ್ನೂ ಇದೆ ಜಾತಿ ಧರ್ಮಗಳನ್ನು ವಿಭಜಿಸುವ ಷಡ್ಯಂತ್ರವನ್ನು ನಾವು ಹಿಮ್ಮೆಟ್ಟಿಸಬೇಕಾಗಿದೆ. ಉಕ್ರೇನ್ ಮತ್ತು ರಷ್ಯಾ ಎರಡೂ ದೇಶದ ಪ್ರಧಾನಿಗಳ ಜೊತೆ ಏಕಕಾಲದಲ್ಲಿ ಮಾತುಕತೆ ನಡೆಸುವ ತಾಕತ್ತು ಇರುವುದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ. ನಮ್ಮ ದೇಶಕ್ಕೆ ವಿದೇಶದಲ್ಲಿ ಗೌರವ ಸಿಗುತ್ತಿದೆ. ನರೇಂದ್ರ ಮೋದಿ ಸರಕಾರದ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ. ಇಂತಹ ಪ್ರಧಾನಿಯನ್ನು ಪಡೆದ ನಾವು ಧನ್ಯರು ಎಂದಿದ್ದಾರೆ.
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ್ಯ ಕುಯಿಲಾಡಿ ಸುರೇಶ್ ನಾಯಕ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉಸ್ತುವಾರಿ ಸಚಿವರಾದ ಎಸ್. ಅಂಗಾರ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಕರಾವ:ಳಿ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ್ಯ ಮಟ್ಟಾರ್ ರತ್ನಾಕರ್ ಹೆಗ್ಡೆ, ರಾಜ್ಯ ಬಿಜೆಪಿ ಉಪಾಧ್ಯಕ್ಷ್ಯೆ ನಯನಾ ಗಣೇಶ್, ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥತರಿದ್ದರು.