ಮೂಡುಬಿದಿರೆ, ಜ 03(SM): ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ಮಹಿಳೆಯರ ಪ್ರವೇಶದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಮೂಡುಬಿದಿರೆ ಘಟಕ ಹಾಗೂ ಸಮಸ್ತ ಅಯ್ಯಪ್ಪ ಭಕ್ತ ವೃಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿ ಕೇರಳದಲ್ಲಿ ಕಮ್ಯೂನಿಸ್ಟ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಆಗ್ರಹಿಸಿದರು.
ಪಿಣರಾಯಿ ನೇತೃತ್ವದ ಸರ್ಕಾರವು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದು ಪೊಲೀಸ್ ಪಡೆಯನ್ನು ದುರುಪಯೋಗಗೊಳಿಸುವಲ್ಲಿ ನಾಸ್ತಿಕವಾದಿಗಳ ಈ ಪ್ರಯತ್ನ ಷಡ್ಯಂತ್ರವಾಗಿದೆ. ಧಾರ್ಮಿಕ ನಿಷ್ಠೆಯ ವೃತದ ನಿಯಮವನ್ನು ಭಂಗಗೊಳಿಸಿದ ಪಿಣರಾಯಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸುವಂತೆ ಮೂಡುಬಿದಿರೆ ತಾಲೂಕು ತಹಶೀಲ್ದಾರರ ಮೂಲಕ ರಾಷ್ಟ್ರಪತಿಯವರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮೂಡುಬಿದಿರೆ ಘಟಕದ ಅಧ್ಯಕ್ಷ ಕೆ.ಶ್ಯಾಮ ಹೆಗ್ಡೆ, ವಿ.ಹಿಂ.ಪ ಮುಖಂಡರಾದ ಸುದರ್ಶನ್ .ಎಂ, ಸೋಮನಾಥ್ ಕೋಟ್ಯಾನ್, ಶಂಕರ ಕರ್ಕೇರಾ ಮತ್ತಿತರರು ಉಪಸ್ಥಿತರಿದ್ದರು.