ಮಂಗಳೂರು, ಮೇ 07 (DaijiworldNews/MS): ಹಲವಾರು ದಾಳಿಗಳ ನಂತರವೂ ಹಿಂದೂ ಧರ್ಮ ಹಾಗೂ ಸಂಸ್ಕೃತಿ ಉಳಿದಿರಲು ಪ್ರಮುಖ ಕಾರಣ ಶಂಕರಾಚಾರ್ಯರು ಎಂದು ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರಿನ ಹವ್ಯಕ ಮಂಡಲದ ಜಂಟಿ ಆಶ್ರಯದಲ್ಲಿ ಮೇ.6ರ ಶುಕ್ರವಾರ ನಂತೂರಿನಲ್ಲಿರುವ ಶ್ರೀ ಭಾರತೀ ಸಮೂಹ ಸಂಸ್ಥೆಯ ಶಂಕರ ಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಂಕರಾಚಾರ್ಯರ ಜಯಂತಿಯಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ನಮಿಸಿ ಮಾತನಾಡಿದರು.
ಕ್ರಿಸ್ತಪೂರ್ವದಿಂದಲೂ ಭಾರತ ದೇಶ ಹಲವು ದಾಳಿಗಳಿಗೆ ತುತ್ತಾಗಿ ಸಾಕಷ್ಟು ಸಂಪತ್ತನ್ನು ಕಳೆದುಕೊಂಡಿದೆ, ಆದರೆ ಯಾರಿಂದಲೂ ಹಿಂದೂ ಧರ್ಮ ಹಾಗೂ ಸಂಸ್ಕೃತಿಯನ್ನು ನಾಶಪಡಿಸಲು ಆಗಲಿಲ್ಲ, ಇದಕ್ಕೆ ಬಹುಮುಖ್ಯ ಕಾರಣ ಶಂಕರಾಚಾರ್ಯರು ನೀಡಿದ ಕಾಣಿಕೆ ಎಂದರು.ಪ್ರಸ್ತುತ ಇಡೀ ಜಗತ್ತು ಭಾರತವನ್ನು ಗೌರವಿಸಲು ಕೂಡ ಅವರು ತೋರಿಸಿಕೊಟ್ಟ ಸನ್ಮಾರ್ಗ ಹಾಗೂ ಅವರು ಉಳಿಸಿದ ಸನಾತನ ಧರ್ಮವೇ ಕಾರಣವಾಗಿದೆ. ಅವರ ಸಂದೇಶವನ್ನು ನಾವೆಲ್ಲರು ಪಾಲಿಸಿದಾಗ ಮಾತ್ರ ಇಂತಹ ಜಯಂತಿಗಳು ಅರ್ಥಪೂರ್ಣವಾಗುತ್ತದೆ ಎಂದರು.
ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ, ಸಂಸ್ಕೃತಿ, ಸನಾತನ ಧರ್ಮ ಹಾಗೂ ವೈದಿಕ ಧರ್ಮ ತನ್ನ ಅಂತಃಸತ್ವ ಕಳೆದುಕೊಂಡಾಗ, ಅದನ್ನು ಒಂದು ಚೌಕಟ್ಟಿನೊಳಗೆ ತಂದಿಟ್ಟು ಧರ್ಮಸಂದೇಶ ಸಾರಿದ ಮಹಾತ್ಮರು ಶಂಕರಾಚಾರ್ಯರು. ಅತ್ಯಂತ ಕಡಿಮೆ ವಯಸ್ಸಿನಲ್ಲಿ ಅಗಾಧ ಜ್ಞಾನ ಸಂಪಾದನೆ ಮಾಡಿ ದೇಶದಾದ್ಯಂತ ಧರ್ಮ ಹಾಗೂ ಸಂಸ್ಕೃತಿಯ ಶ್ರೀಮಂತಿಕೆಯನ್ನು ಹೆಚ್ಚಿಸಿದರು. ಆಚಾರ್ಯರ ವಾಣಿಯಂತೆ ಆತ್ಮ ವಂಚನೆಯಿಲ್ಲದೆ ನಮ್ಮೊಳಗೆ ಶ್ರೇಷ್ಠವಾಗಿದ್ದಾಗಲೇ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ಅಹಂ ಬ್ರಹ್ಮಾಸ್ಮಿ ಎಂಬ ಅವರ ಸಂದೇಶವು ಕೂಡ ಅದನ್ನೇ ಬೋಧಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಹವ್ಯಕ ಮಂಡಲ ಅಧ್ಯಕ್ಷ ಗಣೇಶ್ ಮೋಹನ್ ಕಾಶಿಮಠ, ಭಾರತೀ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಹಾಗೂ ಇತರೆ ಗಣ್ಯರು ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವ ಅರ್ಪಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ದಿವಾಣ ಕೇಶವ ಭಟ್ ಅವರು ಶಂಕರಾಚಾರ್ಯರ ಕುರಿತು ಸಂದೇಶ ನೀಡಿದರು.