ಕಾರ್ಕಳ,ಜ 03(MSP): ನಿಟ್ಟೆ ಗ್ರಾಮದ ಅರ್ಬಿ ಪಾಲ್ಸ್ ಸಮೀಪದ ಸರಕಾರಿ ಹಾಡಿಯಲ್ಲಿ ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ತಂಡದಲ್ಲಿ ಸಕ್ರಿಯಾರಾಗಿದ್ದ ಐವರು ಆರೋಪಿಗಳನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್ ಬಂಧಿಸಿದ್ದಾರೆ.
ನಿಟ್ಟೆ ಬೋರ್ಗಲ್ಗುಡ್ಡೆ ಮಹಮ್ಮದ್ ಅಶ್ರಫ್(38) ನಿಟ್ಟೆ ಅಂಬಡೆಕಲ್ಲು ಸೋಮನಾಥ(33), ನಿಟ್ಟೆ ಅಂಬಡೆಕಲ್ಲು ಶಂಕರ(38) ನಿಟ್ಟೆ ಪರಪ್ಪಾಡಿ ಕ್ರಾಸ್ನ ಪ್ರಸನ್ನ ಪೂಜಾರಿ(21), ನಿಟ್ಟೆ ಅಂಬಡೆಕಲ್ಲು ಪ್ರಶಾಂತ್(28) ಬಂಧಿತ ಆರೋಪಿಗಳು. ನಿಟ್ಟೆ ಲೆಮಿನಾ ಕ್ರಾಸ್ನ ಸುರೇಶ್ ಪರಾರಿಯಾದವನು. ಜನವರಿ 3 ನಸುಕಿನ ಜಾವ 5.30ರ ವೇಳೆಗೆ ಖಚಿತ ವರ್ತಮಾನದ ಮೇರೆಗೆ ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದಾಗ ಮೇಲಿನ ಅಂಶ ಬೆಳಕಿಗೆ ಬಂದಿದೆ.
ಘಟನಾ ಸ್ಥಳದಿಂದ ದನದ ತಲೆ, ದನದ ಬಾಲ,ದನದ ಚರ್ಮ, 2 ಚೂರಿ, ಪ್ಲಾಸ್ಟಿಕ್ ಹೊದಿಕೆ ,ಹುರಿ ಹಗ್ಗ, 55 ಕೆ.ಜಿ ದನದ ಮಾಂಸವನ್ನು ಪೊಲೀಸರು ವಶ ಪಡಿಸಿದ್ದಾರೆ. ಆರೋಪಿತರು ಸಮಾನ ದುರುದ್ದೇಶದಿಂದ ಎಲ್ಲಿಂದಲೋ ಕದ್ದು ತಂದು ಕಾನೂನು ಬಾಹಿರವಾಗಿ ಪರಿಸರಕ್ಕೆ ಹಾನಿಕಾರ ರೀತಿಯಲ್ಲಿ ದನವನ್ನು ವಧಿಸಿ ಮಾರಾಟ ಮಾಡುತ್ತಿದ್ದರು. ಕಳೆದ ಕೆಲ ತಿಂಗಳುಗಳಿಂದ ಇದೇ ಪರಿಸರದಲ್ಲಿ ದನಗಳ ವಧೆ ನಿರಂತರವಾಗಿ ನಡೆಯುತ್ತಿತ್ತೆಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.