ಬಂಟ್ವಾಳ, ಮೇ 06 (DaijiworldNews/DB): ಕನ್ಯಾನ ಗ್ರಾಮದ ಕಣಿಯೂರಿನ ಬಾಡಿಗೆ ಮನೆಯೊಂದರಲ್ಲಿ ನಿಗೂಢವಾಗಿ ಮೃತಪಟ್ಟ ವಿದ್ಯಾರ್ಥಿನಿಯ ಮನೆಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಭೇಟಿ ನೀಡಿ ಮೃತ ವಿದ್ಯಾರ್ಥಿನಿಯ ಫೋಷಕರಿಂದ ಮಾಹಿತಿ ಪಡೆದುಕೊಂಡು ಅವರಿಗೆ ಧೈರ್ಯ ತುಂಬಿದರು.
ಬಳಿಕ ಮಾತನಾಡಿದ ಅವರು, ಬಡ ಕುಟುಂಬವನ್ನು ದುರುಪಯೋಗ ಮಾಡಬಾರದು. ತಾಳ್ಮೆ, ಸಹನೆ, ದೌರ್ಬಲ್ಯವಲ್ಲ, ಅದೊಂದು ಶಕ್ತಿ. ಸನಾತನ ಹಿಂದೂ ಧರ್ಮ ಎಚ್ಚರವಾಗಬೇಕು, ಜಾಗೃತರಾಗಬೇಕು. ಯಾವುದೇ ವರ್ಗಕ್ಕೆ ಈ ರೀತಿಯ ಪರಿಸ್ಥಿತಿ ಆಗಬಾರದು. ಇದೊಂದು ಪೈಶಾಚಿಕ ದುಷ್ಕೃತ್ಯವಾಗಿದೆ. ಎಲ್ಲರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇದೇ ಆರಂಭ ಇದೇ ಕೊನೆಯಾಗಬೇಕು. ನಾವೆಲ್ಲರೂ ಸಂಘಟಿತರಾಗಿ ಎಚ್ಚರದಿಂದಿರಬೇಕು ಎಂದು ನುಡಿದರು.
ಈ ಸಾವು ಬೇರೆಯೇ ರೀತಿಯಲ್ಲಿ ನಡೆದಿರುವುದಾಗಿ ಕಂಡು ಬರುತ್ತಿದೆ. ವಶೀಕರಣ ಬಳಕೆ ಮಾಡಿರುವ ಹಾಗೂ ಹೆದರಿಸಿ ಮಾಡಿರುವ ಘಟನೆಯೆಂದು ನಮಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಒಂದು ಹೆಣ್ಣು ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಾಕ್ಷಿ ಕಂಡು ಬರುತ್ತಿಲ್ಲ. ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗೆ ತಕ್ಕ ಶಿಕ್ಷೆಯಾಗುವಂತಾಗಬೇಕು. ಇನ್ನು ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಬಾರದು. ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರಿಗೂ ಶಿಕ್ಷೆಯಾಗಬೇಕು. ಸನಾತನ ಹಿಂದೂ ಧರ್ಮ ಇಂತಹ ವಿಚಾರ ಬಂದಾಗ ಒಗ್ಗಟ್ಟಾಗಿ ಜಾಗೃತಿಯಾಗಬೇಕು. ಇಂತಹ ದುಷ್ಕೃತ್ಯ ಸಮಾಜದಲ್ಲಿ ನಡೆಯಬಾರದು ಎಂದರು.
ಕನ್ಯಾನ ಗ್ರಾಮ ಪಂಚಾಯತ್ ಸದಸ್ಯ ರಘುರಾಮ ಶೆಟ್ಟಿ ಕನ್ಯಾನ, ಒಡಿಯೂರು ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಪಣೆಯಡ್ಕ, ವಿಶ್ವ ಹಿಂದೂ ಪರಿಷತ್ ಕನ್ಯಾನ ಘಟಕದ ಅಧ್ಯಕ್ಷ ಲೊಕೇಶ್ ಗೌಡ ಕನ್ಯಾನ, ಬಜರಂಗದಳ ಸಂಚಾಲಕ ಕೃಷ್ಣಪ್ಪ ಗೌಡ ಪಣೆಯಡ್ಕ, ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಚಂದ್ರಹಾಸ ಕನ್ಯಾನ, ವಿಶ್ವ ಹಿಂದೂ ಪರಿಷತ್ ಕನ್ಯಾನ ಘಟಕ ಕಾರ್ಯದರ್ಶಿ ಮನೋಜ್ ಕುಮಾರ್ ಬನಾರಿ, ಜಗದೀಶ್ ಸಿ.ಎಚ್., ದಿನೇಶ್ ಪಟ್ಲ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.