ಉಡುಪಿ,,ಜ 03(MSP): ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ ೭ ಮಂದಿ ಮೀನುಗಾರರು ಕಣ್ಮರೆಯಾಗಿದ್ದು, ಇನ್ನೂ ಪತ್ತೆಯಾಗದ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸುವ ಸಲುವಾಗಿ ಜ.೬ರಂದು ಕರಾವಳಿಯ ಮೀನುಗಾರಿಕಾ ಸಂಘಟನೆಗಳು ಆಯೋಜಿಸಿರುವ ರಾಷ್ಟ್ರೀಯ ಹೆದ್ದಾರಿ ತಡೆಗೆ ನಮ್ಮ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ಉಡುಪಿ ತಾಲೂಕು ಮಹಿಳಾ ಹಸಿಮೀನುಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಉಡುಪಿ ತಾಲೂಕು ಹಸಿಮೀನುಮಾರಾಟಗಾರರ ಸಂಘ ಸೇರಿದಂತೆ ಕುಂದಾಪುರ ತಾಲೂಕು ಜೈ ಕರ್ನಾಟಕ ಚಿಲ್ಲರೆ ಮೀನುವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಅಂದು ಉಡುಪಿ ಜಿಲ್ಲೆಯ ಎಲ್ಲಾ ಮೀನುಮಾರುಕಟ್ಟೆಗಳಿಗೆ ಕಡ್ಡಾಯ ರಜೆ ಘೋಷಿಸಲಾಗಿದೆ. ಅಂದು ಮೀನುಮಾರುಕಟ್ಟೆಗಳಲ್ಲಿ ವಹಿವಾಟು ನಡೆಯುವುದಿಲ್ಲ ಗ್ರಾಹಕರು ಸಹಕರಿಸಬೇಕು. ಉಡುಪಿ ಮತ್ತು ಕುಂದಾಪುರದ ಎರಡೂ ಸಂಘಟನೆಗಳ ಮಹಿಳೆಯರು ಬೆಳಗ್ಗಿನಿಂದಲೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉಡುಪಿ ತಾಲೂಕು ಮಹಿಳಾ ಹಸಿ ಮೀನುಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ಮತ್ತು ಕುಂದಾಪುರ ತಾಲೂಕು ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷೆ ರತ್ನ ಮೊಗವೀರ ಬೀಜಾಡಿ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.