ಉಳ್ಳಾಲ, ಮೇ 06 (DaijiworldNews/DB): ಎರಡು ಪ್ರತ್ಯೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಮೊಹಮ್ಮದ್ ಸಮೀರ್ ಯಾನೆ ಕಡಪರ ಸಮೀರ್ ಎಂಬಾತನನ್ನು ಉಳ್ಳಾಲ ಠಾಣೆಯ ಪೊಲೀಸರು ಪಂಪ್ವೆಲ್ನಲ್ಲಿ ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಿದ್ದಾರೆ.
ತಲಪಾಡಿಯಲ್ಲಿ ಕ್ಯಾಂಟಿನ್ ಮಾಲಕರಿಗೆ ಹಾಗೂ ಸೋಮೇಶ್ವರ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪ ಈತನ ಮೇಲಿದೆ.
ಕಳೆದ ಫೆಬ್ರವರಿ 11ರಂದು ತಡರಾತ್ರಿ 2 ಗಂಟೆಯ ಸುಮಾರಿಗೆ ಖಾದರ್ ಎಂಬಾತ ತಲಪಾಡಿಯ ಟೋಲ್ಗೇಟ್ ಬಳಿ ಮೋಟಾರ್ ಸೈಕಲ್ನಲ್ಲಿ ಎನ್ಎಚ್ಎ ಕ್ಯಾಂಟೀನ್ಗೆ ತಲವಾರು ಹಿಡಿದುಕೊಂಡು ಬಂದು ಮಾಲಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ತಲವಾರಿನಿಂದ ಕಡಿದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೆ, ಫೆಬ್ರವರಿ 26ರಂದು ತಡರಾತ್ರಿ 2 ಗಂಟೆಗೆ ಖಾದರ್ ಮತ್ತು ಈತನ ಐವರು ಸಹಚರರು ಸೋಮೇಶ್ವರ ನಿವಾಸಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದ ಕುರಿತು ಇನ್ನೊಂದು ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಎರಡೂ ಪ್ರಕರಣದ ತನಿಖೆ ವೇಳೆ ಕಡಪರದ ಸಮೀರ್ ಭಾಗಿಯಾಗಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಳ್ಳಾಲ ಠಾಣೆಯ ಪಿಎಸ್ಐ ಪ್ರದೀಪ್ ಟಿ.ಆರ್. ಮತ್ತು ತಂಡ ಮಂಗಳೂರಿನ ಪಂಪ್ವೆಲ್ನಲ್ಲಿ ಈತನನ್ನು ವಶಕ್ಕೆ ಪಡೆದುಕೊಂಡು ದಸ್ತಗಿರಿ ಮಾಡಿದ್ದಾರೆ.