ಮಂಗಳೂರು, ಮೇ 06 (DaijiworldNews/MS): ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮೇ.5ರ ಗುರುವಾರ ಮಂಗಳೂರಿನ ಉಳ್ಳಾಲ ಹಾಗೂ ಸುರತ್ಕಲ್ನಲ್ಲಿ ಕಡಲ್ಕೊರೆತಕ್ಕೊಳಗಾಗುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ಸಾರ್ವಜನಿಕರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಕಡಲ್ಕೊರೆತದ ಸಮಸ್ಯೆಗಳು ಹಾಗೂ ಸಮಿತಿಯಿಂದ ಸರ್ಕಾರಕ್ಕೆ ನೀಡಬಹುದಾದ ಪರಿಹಾರಗಳ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಉಳ್ಳಾಲದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಪರಿಶೀಲನೆ ನಡೆಸಿದರು. ಮಲೀನ ನೀರು ಶುದ್ದೀಕರಣ ಘಟಕ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ಕೊರತೆಗಳ ಬಗ್ಗೆಯೂ ಚರ್ಚಿಸಿದರು.
ಸಮಿತಿಯ ಅಧ್ಯಕ್ಷರೂ ಆಗಿರುವ ಹಾಗೂ ವಿಧಾನ ಪರಿಷತ್ ಶಾಸಕರಾದ ಬಿ.ಎಂ. ಫಾರೂಕ್, ಸದಸ್ಯರಾದ ಶಶೀಲ್ ನಮೋಶಿ, ಕೆ.ಟಿ. ಶ್ರೀಕಂಠೇಗೌಡ, ಯು.ಬಿ. ವೆಂಕಟೇಶ್, ರುದ್ರೇಗೌಡ, ಎಸ್.ವಿ. ಶಂಕನೂರು, ಪರಿಸರ ಮತ್ತು ಜೀವಿ ಪರಿಸ್ಥಿತಿಯ ಪ್ರಧಾನ ಕಾರ್ಯದರ್ಶಿ ವಿಜಯ್ ಮೋಹನ್ರಾಜ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಗೋಕುಲ್ದಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್, ಉಳ್ಳಾಲ ನಗರಸಭೆ ಮುಖ್ಯಾಧಿಕಾರಿ ರಾಥೋಡ್ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ವೇಳೆ ಉಪಸ್ಥಿತರಿದ್ದರು.