ಮಂಗಳೂರು, ಮೇ 06 (DaijiworldNews/MS): ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ವಾಟ್ಸ್ಆಯಪ್ ಗ್ರೂಪ್ ಮೇಲೆ ಕಣ್ಣಿಟ್ಟಿದ್ದು ಈ ಬಗ್ಗೆ ಸೂಕ್ತ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿ ಕುಮಾರ್ ಹೇಳಿದ್ದಾರೆ.
ಇತ್ತೀಚೆಗೆ ಕೆಲವು ತಿಂಗಳಿಂದ ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ವಾಟ್ಸ್ಆಯಪ್ ಗ್ರೂಪ್ ಹೆಸರಿನಲ್ಲಿ ಮೂಲಭೂವಾಧಿ ವಿಚಾರಧಾರೆಗಳನ್ನು ಹರಿಯಬಿಡಲಾಗುತ್ತಿದ್ದು, ತಮ್ಮದೇ ಸಮುದಾಯದ ಮಹಿಳೆಯರಿಗೆ ಬೆದರಿಕೆ ಒಡ್ಡುವ, ಎಚ್ಚರಿಕೆ ನೀಡುವ ಸಂದೇಶಗಳು ಈ ಗ್ರೂಪ್ನಲ್ಲಿ ಹರಿದಾಡಿದ್ದು, ಬುರ್ಕಾ ಧರಿಸಿಕೊಂಡು ಬರುವಂತೆ ಮುಸ್ಲಿಂರಿಗೆ ಕಟ್ಟೆಚ್ಚರ ನೀಡುವುದು, ಮಾಲ್ ಗಳಲ್ಲಿ ತಿರುಗಾಡುವ ಮಕ್ಕಳ ಫೋಷಕರಿಗೆ ಎಚ್ಚರಿಕೆ ನೀಡುವುದು ,ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ, ಹಿಜಾಬ್ ತೆಗೆಯದರೆ ಅಂಥವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಮೆಸೇಜ್ಗಳು ಗುಂಪಿನಲ್ಲಿವೆ ಎನ್ನಲಾಗಿದೆ.
ಈ ರೀತಿಯ ಸಂದೇಶ ಹರಿಯಬಿಡುವವರು ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಈ ಬಗ್ಗೆ ಇನ್ನೂ ದೂರು ದಾಖಲಿಸಲಿಲ್ಲ, ವಿದೇಶಿ ಸಿಮ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆಯುವವರ ಬಗ್ಗೆಯೂ ನಿಗಾ ಇರಿಸಿದ್ದೇವೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಮೆಸೇಜ್ ಹರಿಯಬಿಡುವವರ ಎಲ್ಲಾ ಮಾಹಿತಿ ದಾಖಲಾಗುತ್ತಿದೆ. ಅಂತಹವರ ಮೊಬೈಲ್ ವಿವರಗಳು ಸಿಗುತ್ತವೆ. ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇರಿಸುವುದಕ್ಕಾಗಿಯೇ, ಓರ್ವ ಅಧಿಕಾರಿ, ಆರು ಸಿಬ್ಬಂದಿ ಗಳು ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಗಮನಕ್ಕೆ ಬಂದಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಶಶಿ ಕುಮಾರ್ ತಿಳಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಹಾಕಲಾಗುತ್ತಿರುವ ಬೆದರಿಕೆಯುಕ್ತ ಮೆಸೇಜ್ಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಹಾಗೇ, ಪಾಲಕರ ಬಳಿಯೂ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ. ನಿಮ್ಮ ಮಕ್ಕಳಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಸೆಲ್ಫೀ ತೆಗೆಯದಂತೆ ಹೇಳಿ ಎಂಬ ಸಲಹೆಯನ್ನೂ ನೀಡಿದ್ದಾರೆ.